Menu

ಬಾವಿಗೆ ಬಿದ್ದಾತನ ರಕ್ಷಣೆಗೆ ಸರದಿಯಲ್ಲಿ ಹೋದ ಏಳು ಮಂದಿಯೂ ಸಾವು

ಬಾವಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಒಬ್ಬರಾದ ಮೇಲೆ ಒಬ್ಬರಂತೆ ಒಟ್ಟು 7 ಜನ ಹೋಗಿದ್ದವರು ಸೇರಿ ಎಂಟು ಮಂದಿ ಉಸಿರುಕಟ್ಟಿ ಪ್ರಾಣ ಕಳೆದುಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಖಂಡ್ವಾದ ಕೊಂಡಾವತ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರಾದ 8 ಜನರೂ ಗಂಗೌರ್‌ ಹಬ್ಬದ ಆಚರಣೆಯ ಭಾಗವಾಗಿ ನೀರಿನಲ್ಲಿ ಮುಳುಗುವುದಕ್ಕಾಗಿ ಬಾವಿಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದ ವೇಳೆ ಸಂಭವಿಸಿದೆ.

ಬಾವಿಯನ್ನು ಸ್ವಚ್ಛಗೊಳಿಸುವ ವೇಳೆ ಹಗ್ಗ ತುಂಡಾಗಿ ಒಬ್ಬ ಯುವಕ ಬಾವಿಗೆ ಬಿದ್ದಿದ್ದಾನೆ. ಇದನ್ನು ಕಂಡು ಒಬ್ಬೊಬ್ಬರಾಗಿ ಏಳು ಮಂದಿ ಗ್ರಾಮಸ್ಥರು ಒಬ್ಬರನ್ನೊಬ್ಬರು ರಕ್ಷಿಸಲು ಬಾವಿಗೆ ಧುಮುಕಿ ಮೃತಪಟ್ಟಿದ್ದಾರೆ. ಬಾವಿಯೊಳಗಿದ್ದ ವಿಷಾನಿಲದಿಂದ ಉಸಿರುಗಟ್ಟಿ ಈ ಸರಣಿ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ ಎಂದು ಖಾಂಡ್ವಾ ಎಸ್ಪಿ ಮನೋಜ್ ರೈ ತಿಳಿಸಿದ್ದಾರೆ.

ಬಾವಿಗೆ ಧುಮುಕಿದ ಒಬ್ಬರೂ ಕೂಡ ಮೇಲೆ ಬಾರದ ಹಿನ್ನೆಲೆಯಲ್ಲಿ ಕೂಡಲೇ ಗ್ರಾಮಸ್ಥರು ಸ್ಥಳೀಯಾಡಳಿತಕ್ಕೆ ವಿಚಾರ ತಿಳಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ (ಎಸ್‌ಡಿಇಆರ್‌ಎಫ್‌) ವಿಭಾಗದ ಹದಿನೈದು ಸದಸ್ಯರು ಕೆಸರಿನಲ್ಲಿ ಮುಳುಗಿದ ಯುವಕರ ಪತ್ತೆ ಮಾಡಲು ಸಾಹಸಪಟ್ಟರು. ಮೃತರಾದವರನ್ನು ರಾಕೇಶ್, ವಾಸುದೇವ್, ಅರ್ಜುನ್, ಗಜಾನಂದ್, ಮೋಹನ್, ಅಜಯ್, ಶರಣ್ ಮತ್ತು ಅನಿಲ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಖಾಂಡ್ವಾ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಗ್ರಾಮದ ಒಳಚರಂಡಿ ಕಾಲುವೆಯ ನೀರು ಬಾವಿಗೆ ಹರಿಯುತ್ತಿದ್ದಿದ್ದರಿಂದ ಕೊಳಕು ನೀರಾಗಿ ಬದಲಾಗಿದೆ. ಮಾಲಿನ್ಯದಿಂದಾಗಿ ಬಾವಿಯಲ್ಲಿ ವಿಷಕಾರಿ ಅನಿಲಗಳು ಬಿಡುಗಡೆಯಾಗಿವೆ ಎಂದು ಹೇಳಲಾಗಿದೆ. ಈ ಬಾವಿಯನ್ನು ಹಬ್ಬ ಹರಿದಿನಗಳಲ್ಲಿ ವಿಗ್ರಹಗಳ ಮಜ್ಜನಕ್ಕೆ ಮಾತ್ರ ಬಳಸಲಾಗು ತ್ತಿತ್ತು, ಸಂತ್ರಸ್ತ ಯುವಕರ ಕುಟುಂಬ ಸದಸ್ಯರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಿಶವ್ ಗುಪ್ತಾ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *