ಜನವರಿ 17 (ಇಂದು) ಹಾಗೂ 18 ರಂದು ವಿಧಾನಸೌಧದ ಆವರಣದಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಬೆಸ್ಕಾಂ ಹಾಗೂ ಸಚಿವಾಲಯ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ವಿಶೇಷ ಇವಿ ಮೇಳ ಆಯೋಜಿಸಲಾಗಿದೆ.
ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ “ಇವಿ ಮೇಳ – 2025″ಕ್ಕೆ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಚಾಲನೆ ನೀಡಲಿದ್ದಾರೆ. ಸಚಿವಾಲಯದ ನೌಕರರಿಗಾಗಿಯೇ ವಿಶೇಷ ಇವಿ ಮೇಳವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ. ಗೌರವ್ ಗುಪ್ತಾ ಮಾರ್ಗದರ್ಶನದಲ್ಲಿ ನಿಯೋಜಿಸಲಾಗುತ್ತಿದೆ.
ಪ್ರತಿಷ್ಠಿತ ಇವಿ ವಾಹನ ತಯಾರಕರು ಇವಿ ಮೇಳದಲ್ಲಿ ಭಾಗವಹಿಸುತ್ತಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಶೇಷ ರಿಯಾಯಿತಿ ದರದಲ್ಲಿ ವಾಹನ ಮಾರಾಟ ಮಾಡಲಿದ್ದಾರೆ. ಸಚಿವಾಲಯದ ಸಿಬ್ಬಂದಿ ಹಾಗೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕು, ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ವಾಯುಮಾಲಿನ್ಯ ಹಾಗೂ ಏರುತ್ತಿರುವ ವಾಹನಗಳ ಇಂಧನ ದರ ಹೊರೆ ತಗ್ಗಿಸಲು ಇವಿ ವಾಹನಗಳ ಬಳಕೆಯೇ ಪರಿಹಾರ. ಇಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಸಹ ಇರುವುದಿಲ್ಲ. ಸಚಿವಾಲಯ ನೌಕರರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವೂ ದೊರೆಯಲಿದೆ. ಈ ಮಾರಾಟ ಕೇವಲ ಮೇಳಕ್ಕೆ ಸೀಮಿತವಾಗಿರದೇ ಮುಂದಿನ ದಿನಗಳಲ್ಲೂ ವಿಶೇಷ ಮಾರಾಟ ಮುಂದುವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.