ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸುವ ಜೊತೆಗೆ ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಿರುವ ಹಲವು ಕ್ರಮಗಳನ್ನು ಮಂಡಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆಗೆ ಕ್ರಮವು ಕ್ಯಾನ್ಸರ್ ಚಿಕಿತ್ಸೆ ಪಡೆಯುವಲ್ಲಿ ಬಡ ರೋಗಿಗಳಿಗೆ ಬಹಳಷ್ಟು ಅನುಕೂಲಕರವಾಗಿ ಪರಿಣಮಿಸಲಿದೆ.
36 ಜೀವ ರಕ್ಷಕ ಔಷಧಗಳಿಗೆ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುವುದು ಎಂದು ಹೇಳಿದ್ದಾರೆ. ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜಿನಲ್ಲಿ 10 ಸಾವಿರ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಜೀನ್ ಬ್ಯಾಂಕ್ ಸ್ಥಾಪನೆಗೆ ಒತ್ತು ನೀಡಿ ಅನುವಂಶೀಯ ಕಾಯಿಲೆಗಳ ಸಂಶೋಧನೆಯನ್ನು ಉತ್ತೇಸಿಸಲಾಗುವುದು. ಐಐಟಿ, ಐಐಎಸ್‌ಸಿಯಲ್ಲಿ ಹೆಚ್ಚುವರಿ ಸಂಶೋಧನೆಗಳಿಗೆ ಅನುದಾನ, ಭಾರತೀಯ ಜ್ಞಾನ ಸಂಪತ್ತಿನ ಬ್ಯಾಂಕ್ ಸ್ಥಾಪನೆ ಗೆ ಕ್ರಮಗಳನ್ನು ಘೋಷಿಸಿದ್ದಾರೆ. ವೈದ್ಯಕೀಯ ಪ್ರವಾಸೋದ್ಯಮದಲ್ಲಿ ಖಾಸಗಿ ಪಾಲುದಾರಿಕೆಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.