ಬೇಡಿಕೆ ಈಡೇರಿಕೆಗಾಗಿ ಕೆಎಸ್‌ಆರ್‌ಟಿಸಿ, ಬಿಎಂಆರ್ಟಿಸಿ ಸೇರಿ ನಾಲ್ಕು ಸಾರಿಗೆ ನಿಗಮದ ಸಿಬ್ಬಂದಿ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದರೆ ಇದೀಗ ಪ್ರತಿಭಟನೆ ನಡೆಸದಂತೆ ಕಾರ್ಮಿಕ ಇಲಾಖೆ ಎಸ್ಮಾ ಜಾರಿ ಮಾಡಿದೆ.
ಬೇಡಿಕೆಗಳಿಗೆ ಆಗ್ರಹಿಸಿ ನಾಲ್ಕು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರಂದು ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಆದರೆ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿ ಮಾಡಲಾಗಿದೆ.
ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ 2013 ಅಡಿ ಇಂದಿನಿಂದ ಆರು ತಿಂಗಳು ನೌಕರರು ಯಾವುದೇ ಮುಷ್ಕರದಲ್ಲಿ ಭಾಗಿಯಾಗುವಂತ್ತಿಲ್ಲ. ಜುಲೈ 1ರಿಂದ ಡಿಸೆಂಬರ್ 12ರ ವರೆಗೆ ನಿಗಮದಲ್ಲಿ ಮುಷ್ಕರ ನಿರ್ಬಂಧಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಅಗತ್ಯ ಸೇವೆ ನಿರ್ವಹಣೆ ಕಾಯ್ದೆ (ಎಸ್ಮಾ) ಸರ್ಕಾರಿ ನೌಕರನನ್ನು ನಿಯಂತ್ರಣ ಮಾಡುವ ಕಾಯ್ದೆ 1968 ರಿಂದ ಚಾಲ್ತಿಯಲ್ಲಿದೆ. 1994ರಲ್ಲಿ ಕರ್ನಾಟಕದಲ್ಲಿ ಎಸ್ಮಾ ಕುರಿತು ಕಾನೂನಿನ ರೂಪುರೇಷೆ ಸಿದ್ಧಪಡಿಸಲಾಗಿದೆ. ಈ ಕಾಯ್ದೆಯಲ್ಲಿ ಒಟ್ಟು 9 ಸೆಕ್ಷನ್ಗಳಿವೆ. ಸೆಕ್ಷನ್ 2ರ ಪ್ರಕಾರ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಮೇಲೆ ಸರ್ಕಾರ ಎಸ್ಮಾ ಜಾರಿ ಮಾಡಬಹುದಾಗಿದೆ. ಸೆಕ್ಷನ್ 3ರ ಪ್ರಕಾರ ಸಂಸ್ಥೆಗಳು ಮುಷ್ಕರ ನಡೆಸದಂತೆ ಸರ್ಕಾರ ಆದೇಶ ಹೊರಡಿಸಬಹುದು. ಒಮ್ಮೆ ಆದೇಶ ಹೊರಡಿಸಿದರೆ ಅದು 1 ವರ್ಷ ಕಾಲ ಊರ್ಜಿತದಲ್ಲಿ ಇರಲಿದ್ದು, ಈ ಸಂದರ್ಭದಲ್ಲಿ ಯಾವುದೇ ನೌಕರರು ಅಥವಾ ಸಂಘಟನೆ ಮುಷ್ಕರ ನಡೆಸಿದರೆ ಅದು ಕಾನೂನುಬಾಹಿರವಾಗುವುದು.
ನೌಕರರು ಅಥವಾ ಸಂಘಟನೆ ಕಾನೂನುಬಾಹಿರ ಮುಷ್ಕರ ನಡೆಸಿದರೆ 1 ವರ್ಷ ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸುವ ಅವಕಾಶವಿರುತ್ತದೆ. ಕಾನೂನುಬಾಹಿರ ಮುಷ್ಕರಕ್ಕೆ ಪ್ರೇರಣೆ ಅಥವಾ ಪ್ರಚೋದನೆ ನೀಡುವುದು ಕೂಡ ಅಪರಾಧವಾಗಿದ್ದು, ಸೆಕ್ಷನ್ 5ರ ಪ್ರಕಾರ 1 ವರ್ಷ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಬಹುದಾಗಿದೆ.