ಪಶ್ಚಿಮ ಘಟ್ಟಗಳ ಸಂರಕ್ಷಣೆ ವರದಿ ರಚಿಸಿದ್ದ ಹಿರಿಯ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ (83) ಪುಣೆಯಲ್ಲಿ ಬುಧವಾರ ನಿಧನರಾದರು. ಮಾಧವ ಗಾಡ್ಗೀಳ್ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಮಾಜಿ ಸದಸ್ಯರಾಗಿ ಮತ್ತು 2010 ರ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿ ಮುಖ್ಯಸ್ಥರಾಗಿದ್ದರು. ಇವರು ಅಧ್ಯಯನ ನಡೆಸಿ ತಯಾರಿಸಿದ್ದ ವರದಿ ಗಾಡ್ಗೀಳ್ ಆಯೋಗದ ವರದಿ ಎಂದೇ ಹೆಸರಾಗಿದೆ.
1942 ರ ಮೇ 24 ರಂದು ಪುಣೆಯಲ್ಲಿ ಜನಿಸಿದ ಇವರು ಫರ್ಗುಸನ್ ಕಾಲೇಜಿನಿಂದ ಬಿಎಸ್ಸಿ (ಪ್ರಾಣಿಶಾಸ್ತ್ರ) ಪದವಿ ಪಡೆದು 1965 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪಡೆದು, 1969 ರಲ್ಲಿ ಹಾರ್ವರ್ಡ್‌ನಿಂದ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು.
1973 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿ 2004ರಲ್ಲಿ ಅಧ್ಯಕ್ಷರಾಗಿ 30 ವರ್ಷ ಸೇವೆ ಸಲ್ಲಿಸಿದ್ದರು. ಡಾ. ಗಾಡ್ಗೀಳ್ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಸದಸ್ಯರಾಗಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯರಾಗಿ ಮತ್ತು ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಸಚಿವ ಈಶ್ವರ್ ಖಂಡ್ರೆ ಸಂತಾಪ
ಮಾಧವ ಗಾಡ್ಗೀಳ್ ನಿಧನಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನ ಸುದ್ದಿ ತಿಳಿದು ಅತೀವ ದುಃಖವಾಯಿತು. ಪಶ್ಚಿಮಘಟ್ಟದ ಉಳಿವಿಗೆ ಮತ್ತು ಸಂರಕ್ಷಣೆಗೆ ಜೀವನವನ್ನು ಮುಡಿಪಾಗಿಟ್ಟಿದ್ದ ಗಾಡ್ಗೀಳ್ 83ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದು, ಆತ್ಮಕ್ಕೆ ಶಾಂತಿ ದೊರಕಲಿ. ಅಭಿಮಾನಿಗಳಿಗೆ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.


