Menu

ರಾಯಚೂರು ಗ್ರೀನ್ ಫೀಲ್ಡ್ ಏರ್ಪೋರ್ಟ್ ಗೆ ಪರಿಸರ ಮಂತ್ರಾಲಯ ಗ್ರೀನ್ ಸಿಗ್ನಲ್

ಬೆಂಗಳೂರು: ರಾಯಚೂರಿನಲ್ಲಿ ನಿರ್ಮಿಸಲಾಗುತ್ತಿರುವ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಕೇಂದ್ರ ಪರಿಸರ ಮಂತ್ರಾಲಯ ಅನುಮತಿ ನೀಡಿದ್ದು ಬಹಳ ಸಂತಸದ ವಿಷಯವಾಗಿದೆ. ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಆಗಿರುವ ರಾಯಚೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಕನಸು ನನಸಾಗುವ ಕಾಲ ಮತ್ತಷ್ಟು ಸಂಹಿತವಾಗಿದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್ ಎಸ್ ಬೋಸರಾಜು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು ರಾಯಚೂರು ನಗರದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನ ನಿರ್ಮಿಸಬೇಕು, ಈ ಮೂಲಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಇಂಬು ನೀಡಬೇಕು ಎನ್ನುವುದು ನಮ್ಮ ಸರಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ನಂತರ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವನ್ನು ಚುರುಕು ಗೊಳಿಸಲಾಗಿತ್ತು.

ನಮ್ಮ ಕಾಂಗ್ರೆಸ್‌ ಸರ್ಕಾರ ರಾಯಚೂರಿನಲ್ಲಿ ನೂತನ ಗ್ರೀನ್‌ ಫೀಲ್ಡ್‌ ಏರ್‌ಪೋರ್ಟ್‌ ಮಾಡಲು ಬಹಳ ಪ್ರಯತ್ನ ಮಾಡಿತ್ತು. ಅಲ್ಲದೇ, ಆಯವ್ಯಯದಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿಶೇಷ ಕಾಳಜಿ ವಹಿಸಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಮಾಡಿದ್ದರು. ರಾಯಚೂರು ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಸರ್ಕಾರ ನೀಡುವುದಾಗಿಯೂ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮದ ವತಿಯಿಂದ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ಬಗ್ಗೆ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಎಂ.ಬಿ ಪಾಟೀಲ್ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ಅವರು ಕೂಡಾ ವಿಶೇಷ ಒತ್ತು ನೀಡಿದ್ದರು.

ರಾಯಚೂರು ಸಂಸದ ಜಿ ಕುಮಾರ ನಾಯ್ಕ್‌ ಹಾಗು ರವಿ ಭೋಸರಾಜು ಅವರು ಇತ್ತೀಚಿಗೆ ಕೇಂದ್ರ ವಿಮಾನಯಾನ ಸಚಿವ ರಾಮ್‌ ಮೋಹನ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ವಿಮಾನಯಾನ ಸಚಿವರು, ಅಗತ್ಯ ಅನುಮತಿಯನ್ನು ನೀಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದಿಂದ ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆಗೆ ಉತ್ತಮ ಸಂಪರ್ಕ ದೊರೆತು, ಸರ್ವತೋಮುಖ ಅಭಿವೃದ್ದಿಗೆ ಅನುಕೂಲವಾಗಲಿದೆ.

ತ್ವರಿತಗತಿಯಲ್ಲಿ ಕೇಂದ್ರ ಪರಿಸರ ಮಂತ್ರಾಲಯ ದಿಂದ ಅನುಮತಿ ದೊರೆತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಹಾಗೂ ಕೇಂದ್ರ ವಿಮಾನಯಾನ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *