ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಇತ್ತೀಚೆಗೆ ರಾಜ್ಯದ 17 ಸ್ಥಳಗಳಲ್ಲಿ ನಡೆಸಿದ್ದ ದಾಳಿ ವೇಳೆ 1.37 ಕೋಟಿ ನಗದು ಸೇರಿ ಮಹತ್ವದ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಕ್ಕೆ ಪಡೆದಿದ್ದಾರೆ.
ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಅಕ್ರಮ ಹಣ ವರ್ಗಾವಣೆ ಬೆಳಕಿಗೆ ಬಂದಿದ್ದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಜೂ.25 ಮತ್ತು 26ರಂದು ಬೆಂಗಳೂರಿನ ಪ್ರತಿಷ್ಠಿತ ಮೂರು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು, ಈ ಕಾಲೇಜುಗಳಿಗೆ ಸಂಬಂಧಿಸಿದ ವ್ಯಕ್ತಿಗಳು, ಇತರ ಕೆಲವು ಶಿಕ್ಷಣ ಸಂಸ್ಥೆಗಳು ಹಾಗೂ ಮಧ್ಯವರ್ತಿಗಳ ಕಚೇರಿ, ಮನೆಗಳು ಸೇರಿದಂತೆ 17 ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವ್ಯಾಪಕವಾಗಿ ಸೀಟ್ ಬ್ಲಾಕಿಂಗ್ ಮತ್ತು ಹಣದ ಅಕ್ರಮಕ್ಕೆ ಪುರಾವೆಗಳು ಸಿಕ್ಕಿವೆ.
ಸೀಟ್ ಬ್ಲಾಕಿಂಗ್ ದಂಧೆ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಅಧಿಕಾರಿಗಳು ಕಳೆದ ನವೆಂಬರ್‌ನಲ್ಲಿ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆಗೆ ಇಳಿದಿದ್ದ ಪೊಲೀಸರು, ಕೆಇಎ ಹೊರಗುತ್ತಿಗೆ ನೌಕರರು, ಮಧ್ಯವರ್ತಿಗಳು ಸೇರಿದಂತೆ ಒಟ್ಟು 12 ಆರೋಪಿಗಳನ್ನು ಬಂಧಿಸಿ ಮಾಹಿತಿ ಕಲೆ ಹಾಕಿದ್ದರು.