ನವದೆಹಲಿ: ಉದ್ಯೋಗ ಕೊಡಿಸುವ ನೆಪದಲ್ಲಿ ಕರೆದೊಯ್ದು ಆಗ್ನೇಯ ಏಷ್ಯಾ ದೇಶಗಳಲ್ಲಿ ಸೈಬರ್ಕ್ರೈಂ ಕೇಂದ್ರದಲ್ಲಿ ಕೆಲಸಕ್ಕಾಗಿ ಇರಿಸಿಕೊಂಡಿದ್ದ 266ಕ್ಕೂ ಹೆಚ್ಚು ಭಾರತೀಯರನ್ನು ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವಾಲಯದ ವಕ್ತಾರ ರಣ್ಧೀರ್ ಜೈಸ್ವಾಲ್, “ಐಎಎಫ್ ವಿಮಾನದಲ್ಲಿ ೨೬೬ ಭಾರತೀಯರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕರೆತಂದಿದೆ. ಇವರನ್ನೆಲ್ಲಾ ಆಗ್ನೇಯ ಏಷ್ಯಾ ದೇಶಗಳಲ್ಲಿನ ಸೈಬರ್ ಕ್ರೈಂ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ.
ಸೋಮವಾರ ಇದೇ ರೀತಿ ೨೮೩ ಭಾರತೀಯರನ್ನು ಕರೆತರಲಾಗಿತ್ತು. ಮಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರದ ಜೊತೆಗೆ ಭಾರತದ ರಾಯಭಾರ ಕಚೇರಿಗಳು ಭಾರತೀಯರ ಸುರಕ್ಷಿತ ಬಿಡುಗಡೆ ಹಾಗೂ ಅವರನ್ನು ಸ್ವದೇಶಕ್ಕೆ ಕರೆತರುವ ಕುರಿತು ಕೆಲಸ ಮಾಡುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
ಭಾರತದಿಂದ ನಕಲಿ ಉದ್ಯೋಗ ಆಮಿಷದ ನೆಪವೊಡ್ಡಿ ಕರೆದೊಯ್ದಿರುವ ಇವರನ್ನೆಲ್ಲಾ ಒತ್ತಾಯಪೂರ್ವಕವಾಗಿ ಮಯನ್ಮಾರ್-ಥೈಲ್ಯಾಂಡ್ ಗಡಿಗಳಲ್ಲಿ ವಂಚನೆ ಪ್ರಕರಣದಲ್ಲಿ ಕಾರ್ಯನಿರ್ವಹಿಸಲು ಹಾಗೂ ಸೈಬರ್‌ಕ್ರೈಂ ಪ್ರಕರಣದಲ್ಲಿ ತೊಡಗಿಸಲಾಗಿದೆ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿನ ಭಾರತೀಯ ರಾಯಭಾರಿಗಳು ಸ್ಥಳೀಯ ಅಧಿಕಾರಿಗಳ ಸಹಯೋಗದಿಂದ ಇಂದು ೨೮೩ ಭಾರತೀಯರನ್ನು ರಕ್ಷಿಸಿದ್ದು, ಅವರನ್ನು ಥೈಲ್ಯಾಂಡ್‌ನಲ್ಲಿನ ಮೆ ಸೊಟ್‌ನಿಂದ ಐಎಎಫ್ ವಿಮಾನದ ಮೂಲಕ ಕರೆತರಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.