ಬೆಂಗಳೂರಿನ ಜಯನಗರದಲ್ಲಿ ಉದ್ಯಮಿಯೊಬ್ಬರ ಕಚೇರಿಯಲ್ಲಿ 20 ವರ್ಷಗಳಿಂದಲೂ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತ ಬಂದಿರುವ ವ್ಯಕ್ತಿ ಕಚೇರಿಯಲ್ಲಿ ಚಿನ್ನ, ಬೆಳ್ಳಿ, ನಗದು ಕದಿಯುತ್ತಿದ್ದು, ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಬಂಧಿತ ಆರೋಪಿಯಾಗಿದ್ದು, ಆತನಿಂದ 89.09 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾನೈಟ್ ಉದ್ಯಮಿಯೊಬ್ಬರ ಜಯನಗರದ 8ನೇ ಬ್ಲಾಕ್‌ನ ಸಂಗಂ ಸರ್ಕಲ್‌ನಲ್ಲಿರುವ ಕಚೇರಿಯಲ್ಲಿ 20 ವರ್ಷಗಳಿಂದ ಕಾರ್ತಿಕ್ ಕೆಲಸ ಮಾಡಿಕೊಂಡಿದ್ದ. ಸಾಲ ಮಾಡಿಕೊಂಡಿದ್ದ ಆತ, ಅದನ್ನು ತೀರಿಸಲು ಕಳ್ಳತನ ಮಾಡಲು ಸಂಚು ರೂಪಿಸಿ 8 ವರ್ಷಗಳ ಹಿಂದೆಯೇ ಕಚೇರಿಯ ಕಬೋರ್ಡ್‌ನ ನಕಲಿ ಕೀಯನ್ನು ಸಿದ್ಧಪಡಿಸಿಟ್ಟುಕೊಂಡಿದ್ದ. ಆ ಕೀ ಬಳಸಿ ಮಾಲೀಕರು ಇಲ್ಲದ ವೇಳೆ ಚಿನ್ನಾಭರಣ, ಬೆಳ್ಳಿ, ನಗದನ್ನು ದೋಚುತ್ತಿದ್ದ. ಮಾಲೀಕರಿಗೆ ಅನುಮಾನ ಬಂದು ಪ್ರಶ್ನಿಸಿದಾಗ ಯಾರೋ ಕಳ್ಳತನ ಮಾಡಿರಬಹುದು ಎಂದು ಹಾರಿಕೆಯ ಉತ್ತರ ನೀಡುತ್ತಿದ್ದ.
ಅನುಮಾನಗೊಂಡ ಉದ್ಯಮಿ ಜಯನಗರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಜುಲೈ 28ರಂದು ನಕಲಿ ಕೀ ಹಾಗೂ ನಗದು ಸಮೇತ ಕಾರ್ತಿಕ್‌ನನ್ನು ಆತನ ಮನೆಯಲ್ಲೇ ವಶಕ್ಕೆ ಪಡೆದಿದ್ದರು. ವಿಚಾರಣೆಗೊಳಪಡಿಸಿದಾಗ ಸಾಲ ತೀರಿಸಲು ತಾನು ಕಳ್ಳತನ ಎಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕದ್ದ ಚಿನ್ನದಲ್ಲಿ ಕೆಲವನ್ನು ತ್ಯಾಗರಾಜನಗರದ ಜ್ಯುವೆಲ್ಲರಿ ಅಂಗಡಿ ಹಾಗೂ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟು ಹಣ ಪಡೆದುಕೊಂಡಿದ್ದ. ಅವುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿ ಕಾರ್ತಿಕ್‌ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.