Tuesday, November 18, 2025
Menu

ಸಂಪನ್ಮೂಲ ಸಂರಕ್ಷಣೆಗೆ ಪುನರ್ ಬಳಕೆಗೆ ಒತ್ತು ಅಗತ್ಯ: ಸಚಿವ ಈಶ್ವರ ಖಂಡ್ರೆ

eshwar khandre

ಬೆಂಗಳೂರು8: ನೈಸರ್ಗಿಕ ಸಂಪನ್ಮೂಲಗಳ ಸುದೀರ್ಘ ಬಳಕೆ ಮತ್ತು ಸಂರಕ್ಷಣೆಗಾಗಿ ಮರು ಬಳಕೆ ಮತ್ತು ಪುನರ್ ಬಳಕೆಗೆ ಒತ್ತು ನೀಡಬೇಕಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ನಗರದ ಖಾಸಗಿ ಹೊಟೆಲ್ ನಲ್ಲಿಂದು ನಡೆದ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಮತ್ತು “ಸಂಪನ್ಮೂಲಗಳ ಸುದೀರ್ಘ ಬಳಕೆಯ ಆರ್ಥಿಕತೆ ಮತ್ತು ಸುಸ್ಥಿರತೆಯ ಸಮ್ಮೇಳನ” ಉದ್ಘಾಟಿಸಿ ಅವರು ಸಂಪನ್ಮೂಲದ ಹಿತ-ಮಿತ ಬಳಕೆಯ ಅಗತ್ಯ ಪ್ರತಿಪಾದಿಸಿದರು.

ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು, ಪ್ರಕೃತಿಯೂ ಉಳಿಯಬೇಕು, ಪ್ರಗತಿಯೂ ಆಗಬೇಕು ಎಂಬುದು ನಮ್ಮ ಸರ್ಕಾರದ ನಿಲುವಾಗಿದ್ದು, ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

1987 ರಲ್ಲಿ, ವಿಶ್ವಸಂಸ್ಥೆಯ ಬ್ರಂಡ್ಲ್ಯಾಂಡ್ ಆಯೋಗ “ಭವಿಷ್ಯದ ಪೀಳಿಗೆಯ ಸ್ವಂತ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಇಂದಿನ ಪೀಳಿಗೆಯ ಅಗತ್ಯಗಳನ್ನು ಪೂರೈಸುವುದು”. ‘ಸುಸ್ಥಿರತೆ’ ಎಂದು ವ್ಯಾಖ್ಯಾನಿಸಿದೆ. ನಾವು ಉತ್ತಮ ರೂಢಿಗಳನ್ನು ಅಳವಡಿಸಿಕೊಂಡು ಪ್ರಗತಿಯ ಪಥದಲ್ಲಿ ಸಾಗುವುದರ ಜೊತೆಗೆ ಪ್ರಕೃತಿ ಪರಿಸರ ಉಳಿಸಬೇಕಿದೆ ಎಂದರು.

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಜಗತ್ತು ಎದುರಿಸುತ್ತಿದೆ. ಈ ಕಾಲಘಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಪರಿಸರ ಸ್ನೇಹಿ ರೂಢಿಗಳ ಉತ್ತೇಜನ, ಆಧುನಿಕ ತಂತ್ರಜ್ಞಾನದ ಬಳಕೆ, ನಾವೀನ್ಯತೆಗೆ ಒತ್ತು ನೀಡಿ ಒಟ್ಟಾರೆ ಸುಸ್ಥಿರತೆ ಮಾದರಿಯ ಪರಿಣಾಮಕಾರಿ ಅನುಷ್ಠಾನ ಮಾಡುವ ಮೂಲಕ ಸುಸ್ಥಿರ ಅಭಿವೃದ್ಧಿಯತ್ತ ಸಾಗಬೇಕು ಎಂದು ಹೇಳಿದರು.

ಮರುಬಳಕೆ, ದುರಸ್ತಿ, ಪುನರ್ ಬಳಕೆ ಮಾಡುವ ಮೂಲಕ ಆರ್ಥಿಕವಾಗಿ ಕಾರ್ಯಸಾಧ್ಯವಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕಿದೆ. ನಮ್ಮ ಭೂಗ್ರಹ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ, ಮಂಡಳಿ ಸದಸ್ಯ ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು ಮತ್ತಿತರರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published. Required fields are marked *