ಪ್ರಾಣಿವಿನಿಮಯ ಯೋಜನೆಯ ಅಡಿ ಬನ್ನೇರುಘಟ್ಟದ ಜೈವಿಕ ಉದ್ಯಾನ ವನದಿಂದ ಜಪಾನ್ ಗೆ ಆನೆಗಳನ್ನು ರವಾನೆ ಮಾಡಲಾಗಿದೆ. ಜಪಾನ್ ನ ಹಿಮೇಶಿ ಸೆಂಟ್ರಲ್ ಪಾರ್ಕ್‌ಗೆ ನಾಲ್ಕು ಆನೆಗಳನ್ನು ಕಳುಹಿಸಿದ್ದು, ಗುರುವಾರ ರಾತ್ರಿ ಕತಾರ್ ಏರ್‌ವೇಸ್‌ನಲ್ಲಿ ಆನೆಗಳು ಪ್ರಯಾಣಿಸಿವೆ.
ಬನ್ನೇರುಘಟ್ಟ ಬಳಿಯ ಕಾವಲುಕಟ್ಟೆ ಬಳಿಯಲ್ಲಿ ಕ್ರೇನ್ ಮೂಲಕ ಸುರೇಶ್, ಗೌರಿ, ಶೃತಿ ಮತ್ತು ತುಳಸಿ ಆನೆಗಳನ್ನು ರವಾನಿಸಿದ್ದು, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕಾರ್ಗೋ ವಿಮಾನದ ಮೂಲಕ ಆನೆಗಳು ತೆರಳಿವೆ. ಬನ್ನೇರುಘಟ್ಟದಿಂದ ಇದೇ ಮೊದಲ ಬಾರಿಗೆ ವಿದೇಶಕ್ಕೆ ಪ್ರಾಣಿಗಳ ವಿನಿಮಯ ನಡೆದಿದ್ದು, ಜಪಾನ್‌ನಿಂದ ಭಾರತಕ್ಕೆ ಜಿಂಪಾಜಿ, ಜಾಗ್ವಾರ್, ಪೂಮಾ, ಚೀತಾ ಮರಿಗಳು ಬರಲಿವೆ.
ಜಪಾನ್ – ಭಾರತ ವಿದೇಶಾಂಗ ನೀತಿಯಡಿ ಮೊದಲಿನಿಂದಲೂ ಪ್ರಾಣಿಗಳು ವಿನಿಮಯ ಪದ್ಧತಿ ಚಾಲ್ತಿಯಲ್ಲಿದೆ. 1955 ರಲ್ಲಿ ಮೊದಲ ಬಾರಿಗೆ ಜಪಾನ್‌ಗೆ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಆನೆಗಳನ್ನು ನೀಡಿದ್ದರು. 2021 ರಲ್ಲಿ ಕೂಡ ಮೈಸೂರಿನಿಂದ ಮೂರು ಆನೆಗಳನ್ನು ಜಪಾನ್‌ಗೆ ಕೊಡಲಾಗಿತ್ತು.