Menu

ಹಾಸನದಲ್ಲಿ ಆನೆ ಕಾರಿಡಾರ್‌: ಕೇಂದ್ರದ ಅನುಮತಿ ಸಿಗಬೇಕಿದೆ ಎಂದ ಸಚಿವ ಖಂಡ್ರೆ

ಹಾಸನದಲ್ಲಿ ಆನೆ ಕಾರಿಡಾರ್‌ ನಿರ್ಮಾಣಕ್ಕೆ ರಾಜ್ಯ ಸರಕಾರ 53 ಕೋಟಿ ರೂ. ಅನುದಾನ ಒದಗಿಸಿದ್ದು, ಕೇಂದ್ರ ಸರಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಚನ್ನರಾಯಪಟ್ಟಣದ ಬೆಲಸಿಂದ ಅರಣ್ಯ ಪ್ರದೇಶದಲ್ಲಿ ನವೀಕೃತ ಪ್ರಕೃತಿ ವನ ಉದ್ಘಾಟಿಸಿ ಮಾತನಾಡಿದರು. ವನಗಳು ಎಲ್ಲ ತಾಲೂಕುಗಳಲ್ಲಿ ಇರಬೇಕು, ವನ್ಯ ಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ನಂತರ ಪ್ರಾಣಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ. ಪ್ರಾಣಿಗಳು ಮತ್ತು ಮಾನವ ಸಂಘರ್ಷಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಪಶ್ಚಿಮ ಘಟ್ಟಗಳಲ್ಲಿರುವ ಅನೇಕ ಪ್ರಬೇಧಗಳನ್ನು ಉಳಿಸಬೇಕು. ಜಾಗತಿಕ ತಾಪಮಾನ ಹೆಚ್ಚಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಉತ್ತಮ ಪರಿಸರ ಅಗತ್ಯ. .ನಮ್ಮ ಭೂಭಾಗದ ಶೇ.35 ರಷ್ಟು ಅರಣ್ಯಪ್ರದೇಶ ಕಡ್ಡಾಯವಾಗಿ ಇರಬೇಕಿದ್ದು, ಶೇ.21 ಮಾತ್ರ ಇದೆ. ಇದನ್ನು ಸಂರಕ್ಷಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಶಾಸಕ ಸಿ.ಎನ್‌.ಬಾಲಕೃಷ್ಣ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿಅರಣ್ಯ ಪ್ರದೇಶವನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡಬೇಕು. ಇಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಾಚರ್‌ಗಳನ್ನು ನೇಮಕ ಮಾಡಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಅರಣ್ಯ ಇಲಾಖೆಗೆ ಒಂದು ವಾಹನವನ್ನು ಶಾಸಕರ ನಿಧಿಯಲ್ಲೇ ಕೊಡಿಸಲಾಗುವುದು ಎಂದು ತಿಳಿಸಿದರು.

 

Related Posts

Leave a Reply

Your email address will not be published. Required fields are marked *