Thursday, January 01, 2026
Menu

ಈ ವರ್ಷವೇ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: “ಜಿಬಿಎ ಪಾಲಿಕೆಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಈ ವರ್ಷವೇ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಹೆಬ್ಬಾಳ ಮೇಲ್ಸೇತುವೆ ಬಳಿ ನೂತನ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ಹಾಗೂ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಹೊಸ ವರ್ಷದ ಸಂಕಲ್ಪದ ಬಗ್ಗೆ ಕೇಳಿದಾಗ, “2026ರ ವರ್ಷ ಶುಭ ಲಗ್ನದಲ್ಲಿ ಆರಂಭವಾಗಿದೆ. 2025ರ ವರ್ಷದಲ್ಲಿ ನಾವು ಉತ್ತಮ ಆಡಳಿತ ನೀಡಿದ್ದೇವೆ. ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಟೆಕ್ ಸಮ್ಮೇಳನ ಮೂಲಕ ನಾವು ಕರ್ನಾಟಕವನ್ನು ಮುನ್ನಡೆಸಿದ್ದೇವೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ” ಎಂದರು.

“ನೀರಾವರಿ ಇಲಾಖೆಯಲ್ಲಿ ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಯುಕೆಪಿ, ತುಂಗಾಭದ್ರ ಯೋಜನೆಯಲ್ಲಿ ನಾವು ಕೈಗೊಂಡ ತೀರ್ಮಾನ, ಮೇಕೆದಾಟು ಯೋಜನೆಯಲ್ಲಿ ನ್ಯಾಯಾಲಯದ ತೀರ್ಮಾನ ಇತಿಹಾಸದ ಪುಟ ಸೇರಿವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಅವರ ನಂಬಿಕೆ ಉಳಿಸಿಕೊಳ್ಳಲು, ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ” ಎಂದು ಹೇಳಿದರು.

“ನನ್ನ 35 ವರ್ಷಗಳ ರಾಜಕಾರಣದಲ್ಲಿ ಬೆಂಗಳೂರಿಗೆ ಇಷ್ಟು ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ. ಪ್ರಧಾನಮಂತ್ರಿಗಳು ಕೂಡ ಬೆಂಗಳೂರಿಗೆ ಬಂದಾಗ ಈ ನಗರವನ್ನು ಕೊಂಡಾಡಿದರು. ಅವರು ನಮ್ಮ ನಗರಕ್ಕೆ ಅನುದಾನ ನೀಡದಿದ್ದರೂ ನಾವು ಈ ನಗರಕ್ಕೆ ಹೊಸ ರೂಪ ನೀಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

“ಗೃಹ ಇಲಾಖೆ ಭದ್ರತೆಯಿಂದ ಬೆಂಗಳೂರಿನಲ್ಲಿ ಜನ 2025ಕ್ಕೆ ಬೀಳ್ಕೊಡುಗೆ ನೀಡಿ, 2026ರ ವರ್ಷವನ್ನು ಸ್ವಾಗತಿಸಿದೆ. ಎಲ್ಲೂ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡ ಗೃಹ ಸಚಿವ ಪರಮೇಶ್ವರ್ ಅವರ ನೇತೃತ್ವದ ಇಡೀ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ಹೆಬ್ಬಾಳ ಮೇಲ್ಸೇತುವೆ ಎರಡನೇ ಲೂಪ್ ಉದ್ಘಾಟನೆ

“ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಉತ್ತರ ಭಾಗದ ಜನರ ಸುಗಮ ವಾಹನ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಅನ್ನು ಇಂದು ಉದ್ಘಾಟನೆ ಮಾಡಿದ್ದೇವೆ. ಈ ಭಾಗದ ಜನರು ಹೆಬ್ಬಾಳ ಮೇಲ್ಸೇತುವೆ ಬಳಿ ಸಂಚಾರ ದಟ್ಟಣೆ ದೂರು ಹೇಳುತ್ತಿದರು. ಹೀಗಾಗಿ ನಾವು ತ್ವರಿತ ಗತಿಯಲ್ಲಿ ಪರಿಹಾರ ಕಂಡು ಹಿಡಿದಿದ್ದೇವೆ. ಆಮೂಲಕ ಸಂಚಾರ ದಟ್ಟಣೆ ನಿವಾರಿಸಿದ್ದೇವೆ” ಎಂದು ತಿಳಿಸಿದರು.

“ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ವರ್ಷ ಐವತ್ತನೇ ವಸಂತಕ್ಕೆ ಕಾಲಿಟ್ಟಿದ್ದು, ನನ್ನ ರಾಜಕೀಯ ಜೀವನದಲ್ಲಿ ಹಿಂದೆಂದೂ ಮಾಡಲಾಗದ ಐತಿಹಾಸಿಕ ಯೋಜನೆಗಳನ್ನು ಹಮ್ಮಿಕೊಂಡಿದೆ. 120 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಅನ್ನು ಕಾರ್ಯರೂಪಕ್ಕೆ ತರಲು ರೈತರ ಬಳಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ 35% ವಾಣಿಜ್ಯ ಭೂಮಿಯನ್ನು ರೈತರಿಗೆ ಪರಿಹಾರವಾಗಿ ನೀಡಲಾಗುತ್ತಿದೆ. ಜತೆಗೆ ಸಣ್ಣ ಟೌನ್ ಶಿಪ್ ನಿರ್ಮಾಣಕ್ಕೆ ರೈತರಿಗೆ ಉತ್ತಮ ಪರಿಹಾರ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದೂವರೇ ಕಿ.ಮೀ ಟನಲ್ ರಸ್ತೆ ಬರಲಿದೆ. ಮೇಕ್ರಿ ವೃತ್ತದ ಬಳಿ ಮೇಲ್ಸೇತುವೆ ಸಾಗಲಿದೆ. ಇದನ್ನು ಮೂರು ಭಾಗವಾಗಿ ಕಟ್ಟಲಾಗುವುದು. ಇನ್ನು ತುಮಕೂರು ರಸ್ತೆಯಿಂದ ಕೆ.ಆರ್ ಪುರದ ವರೆಗೆ ಮೇಲ್ಸೇತುವೆ ಮೂಲಕ ಹೊರ ವರ್ತುಲ ರಸ್ತೆ (ಒಆರ್ ಆರ್) ಮಾಡಲು ಮುಂದಾಗಿದ್ದೇವೆ” ಎಂದು ವಿವರಿಸಿದರು.

ನೈಸ್ ನವರಿಗೆ ಪಾಠ ಕಲಿಸುವುದು ಗೊತ್ತಿದೆ:

“ನೈಸ್ ಸಂಸ್ಥೆಯ ಕೆಲವು ಕೆಐಎಡಿಬಿ ಜಾಗವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಇದಕ್ಕೆ ಅವರು ತಕರಾರು ಎತ್ತಿದ್ದಾರೆ. ನೈಸ್ ನವರು ತಾವು ಸರ್ಕಾರಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ. ಹೀಗಾಗಿ ಬೇರೆ ದಾರಿ ಹುಡುಕುತ್ತೇವೆ. ಅವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದು ಗೊತ್ತಿದೆ. ಹೀಗಾಗಿ ಸ್ಕೈಡೆಕ್ ಗಾಗಿ ನಾವು ಬೇರೆ ಕಡೆ ಬಿಡಿಎ ಜಾಗ ಗುರುತಿಸಿದ್ದೇವೆ. ವಿಮಾನ ಹಾರಾಟದ ಟವರ್ ಸಮಸ್ಯೆ ಇರುವ ಕಾರಣ, ಇದನ್ನು ಸೂಕ್ತ ಜಾಗದಲ್ಲಿ ನಿರ್ಮಿಸುತ್ತೇವೆ” ಎಂದರು.

Related Posts

Leave a Reply

Your email address will not be published. Required fields are marked *