ನವದೆಹಲಿ: ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನಿರಂತರ ಪ್ರಯತ್ನದ ಫಲವಾಗಿ ನಕಲಿ ಎಪಿಕ್ ಸಂಖ್ಯೆಗಳ ಸಮಸ್ಯೆಯನ್ನು ಗುರುತಿಸಲು ಚುನಾವಣಾ ಆಯೋಗ ಮುಂದಾಗಿದೆ.
ನಕಲಿ ಎಪಿಕ್ ಸಂಖ್ಯೆಗಳನ್ನು ಪತ್ತೆಹಚ್ಚಲು ಚುನಾವಣಾ ಆಯೋಗವು ತನ್ನ ಆಪ್‌ನಲ್ಲಿ ಹೊಸ ಆಯ್ಕೆಯನ್ನು ಪರಿಚಯಿಸಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮತದಾರರ ಗುರುತಿನ ಚೀಟಿಗಳು ಒಂದೇ ರೀತಿಯ ‘ಎಪಿಕ್’ ಸಂಖ್ಯೆಗಳನ್ನು ಹೊಂದಿರುವ ಬಗ್ಗೆ ತೃಣಮೂಲ ಕಾಂಗ್ರೆಸ್ ಇತ್ತೀಚೆಗೆ ಚುನಾವಣಾ ಆಯೋಗದ ಗಮನಕ್ಕೆ ತಂದಿತ್ತು. ಈ ವಿಚಾರ ಲೋಕಸಭೆಯಲ್ಲಿಯೂ ಚರ್ಚೆಯಾಗಿತ್ತು.
ಹೊಸ ಆಯ್ಕೆಯು ಚುನಾವಣಾ ನೋಂದಣಿ ಅಧಿಕಾರಿಗಳಿಗೆ(ಇಆರ್‌ಒ) ನಿರ್ದಿಷ್ಟ ಎಪಿಕ್ ಸಂಖ್ಯೆಗೆ ಬಹು ಹೆಸರು ಲಗತ್ತಿಸಲಾಗಿದೆಯೇ ಎಂದು ಪತ್ತೆ ಮಾಡಲು ಸಹಾಯ ಮಾಡುತ್ತದೆ. ನಕಲಿ ಎಪಿಕ್ ಸಂಖ್ಯೆಗಳನ್ನು ಗುರುತಿಸುವ ಸಾಫ್ಟ್‌ವೇರ್ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದ ಹಂಗಾಮಿ ಮುಖ್ಯ ಚುನಾವಣಾ ಅಧಿಕಾರಿ ದಿಬ್ಯೇಂದು ದಾಸ್ ಅವರು ಸೋಮವಾರ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಈ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗಳನ್ನು ಮಾರ್ಚ್ ೨೧ ರೊಳಗೆ ಪೂರ್ಣಗೊಳಿಸಲು ಆದೇಶಿಸಲಾಗಿದೆ ಎಂದೂ ಅವರು ಹೇಳಿದರು.
ಮತ ಪ್ರಮಾಣದ ಚರ್ಚೆಗೆ ಸಿದ್ಧ
ಮತಗಟ್ಟೆವಾರು ಮತದಾನ ಪ್ರಮಾಣವನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸುವಂತೆ ಕೇಳಿಬಂದಿರುವ ಒತ್ತಾಯದ ಕುರಿತು ಚರ್ಚಿಸಲು ಸಿದ್ಧ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟಿಗೆ ಹೇಳಿದೆ.
ತಮ್ಮ ಬೇಡಿಕೆಯನ್ನು ಹತ್ತು ದಿನಗಳ ಒಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ನಿರ್ದೇಶಿಸಿದೆ.
ತೃಣಮೂಲ ಕಾಂಗ್ರೆಸ್ನ ಸಂಸದೆ ಮಹುವಾ ಮೊಯಿತ್ರಾ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಂಸ್ಥೆಯು ೨೦೧೯ರಲ್ಲಿ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾ. ಸಂಜಯ್ ಕುಮಾರ್ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಅರ್ಜಿಗಳ ವಿಚಾರಣೆ ನಡೆಸಿತು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಫಲಿತಾಂಶ ಪ್ರಕಟವಾದ ೪೮ ಗಂಟೆಗಳ ಒಳಗಾಗಿ ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ಮತಗಟ್ಟೆವಾರು ಮತ ಹಂಚಿಕೆಯ ಮಾಹಿತಿಯನ್ನು ಪ್ರಕಟಿಸುವ ಕುರಿತು ಚುನಾವಣಾ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು.