Menu

ಬೀದಿನಾಯಿಗಳ ದಾಳಿ ವೃದ್ಧ ಸಾವು: ಲೋಕಾಯುಕ್ತದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

dog bite

ಬೆಂಗಳೂರು:ಕೊಡಿಗೇಹಳ್ಳಿಯ ಟೆಲಿಕಾಮ್ ಲೇಔಟ್ ಬಳಿ ಕಳೆದ ಸೋಮವಾರ ಬೀದಿ ನಾಯಿಗಳು ಕಚ್ಚಿ ವೃದ್ಧ ಸೀತಪ್ಪ ಮೃತಪಟ್ಟ ಪ್ರಕರಣದ ಸಂಬಂಧ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

ಬೀದಿ ನಾಯಿ ದಾಳಿ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಂಡಿದ್ದಾರೆ.

ಜೊತೆಗೆ ಎಸ್ಪಿ ವಂಶಿಕೃಷ್ಣ ಕೋನಾ ನೇತೃತ್ವದ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖಾ ವರದಿಯನ್ನು ನಾಲ್ಕು ದಿನದೊಳಗೆ ನೀಡುವಂತೆ ಲೋಕಾಯುಕ್ತರು ನಿರ್ದೇಶಿಸಿದ್ದಾರೆ.

ದುರ್ಘಟನೆ ಸಂಬಂಧ ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ, ಪಶುಸಂಗೋಪನೆ ವಿಭಾಗದ ಜಂಟಿ ನಿರ್ದೇಶಕರು ಹಾಗೂ ಆರೋಗ್ಯಾಧಿಕಾರಿ ಒಳಗೊಂಡಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಲೋಕಾಯುಕ್ತರು ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು. ಇದರಂತೆ ಎಲ್ಲಾ ಅಧಿಕಾರಿಗಳು ಬುಧವಾರ ವಿಚಾರಣೆ ಹಾಜರಾಗಿ ಘಟನೆ ಬಗ್ಗೆ ಹಾಗೂ ಕೈಗೊಂಡ ಕ್ರಮಗಳ ಕುರಿತು ಹೇಳಿಕೆ ನೀಡಿದರು.

ಜುಲೈ 28ರಂದು ಬೆಳಗಿನ ಜಾವ 3.30ಕ್ಕೆ ಬೀದಿ ನಾಯಿಗಳು ಕಚ್ಚಿದ್ದರಿಂದ ಸೀತಪ್ಪ ಅವರು ಸಾವನ್ನಪ್ಪಿದ್ದಾರೆ. ಈಗಾಗಲೇ 33 ಬೀದಿ ನಾಯಿಗಳನ್ನ ಹಿಡಿದು ನಿಗಾ ಘಟಕದಲ್ಲಿ ಇರಿಸಲಾಗಿದೆ. ಯಾವ ಬೀದಿ ನಾಯಿಗಳು ಕಚ್ಚಿವೆ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೂ ಎಲ್ಲಾ ನಾಯಿಗಳಿಗೂ ಸೂಕ್ತ ಚಿಕಿತ್ಸೆ ನೀಡುವುದಾಗಿ ಲೋಕಾಯುಕ್ತರ ಮುಂದೆ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಯಲಹಂಕದ ಬ್ಯಾಟರಾಯನಪುರ ವಾರ್ಡ್​ನಲ್ಲಿ ಪ್ರತಿ ತಿಂಗಳು 15 ರಿಂದ 20 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗುತ್ತವೆ. ನಾಯಿ ಕಚ್ಚಿದ ವ್ಯಕ್ತಿಗಳಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಳೆದ ಜನವರಿಯಿಂದ ಈವರೆಗೂ ಯಲಹಂಕ ವಲಯದಲ್ಲಿ ಬೀದಿ ನಾಯಿ ಕಚ್ಚಿರುವ ಬಗ್ಗೆ ವರದಿ ನೀಡಬೇಕು. ಘಟನೆ ಬಗ್ಗೆ ವಿವರವಾದ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು ತಾಕೀತು ಮಾಡಿದರು.

ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಟೆಲಿಕಾಮ್ ಲೇಔಟ್ ಬಳಿ ಜುಲೈ 28ರಂದು ವೃದ್ಧ ಸೀತಪ್ಪ ಎಂಬುವರು ಮನೆಯಿಂದ ನಡೆದುಕೊಂಡು ಬರುವಾಗ ಏಳೆಂಟು ನಾಯಿಗಳು ಏಕಾಏಕಿ ದಾಳಿ ನಡೆಸಿದ್ದವು. ಘಟನೆಯಲ್ಲಿ ಸೀತಪ್ಪ ಅವರು ತೀವ್ರ ಗಾಯಗೊಂಡು ಸಾವನ್ನಪ್ಪಿದ್ದರು.

Related Posts

Leave a Reply

Your email address will not be published. Required fields are marked *