Tuesday, December 23, 2025
Menu

ಬಾಡಿಗೆ ತಾಯ್ತನಕ್ಕೆ ವೃದ್ಧ ದಂಪತಿ ಕೋರಿಕೆ: ಸ್ಪಂದಿಸಲು ರಾಜ್ಯ, ಕೇಂದ್ರಕ್ಕೆ ಹೈಕೋರ್ಟ್‌ ನೋಟಿಸ್‌

ಇದ್ದ ಒಬ್ಬನೇ ಮಗನ ಕಳೆದುಕೊಂಡಿರುವ ವೃದ್ಧ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಕಾನೂನು ಅಡ್ಡಿಯಾಗುತ್ತಿರುವುದನ್ನು ಗಮನಿಸಿರುವ ಹೈಕೋರ್ಟ್,ಪ್ರಕರಣವನ್ನು ಕಾನೂನು ಅಡಿ ಅಲ್ಲ, ಮಾನವೀಯತೆಯಿಂದ ನೋಡಬೇಕಿದೆ, ಅರ್ಜಿದಾರರ ಮನವಿಗೆ ಸ್ಪಂದಿಸಲು ಸೂಚಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಅನುಮತಿ ನಿರಾಕರಿಸಿ ರಾಜ್ಯ ಅನುಮೋದಿತ (ಅಪ್ರೋಪ್ರಿಯಟ್‌) ಪ್ರಾಧಿಕಾರ ನೀಡಿರುವ ಆದೇಶ ರದ್ದು ಕೋರಿ ವೃದ್ಧ ದಂಪತಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಾನೂನು ಮತ್ತು ನ್ಯಾಯ ಇಲಾಖೆ ಮತ್ತು ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ-2021 ಅಡಿ ರಾಜ್ಯ ಅನುಮೋದಿತ ಪ್ರಾಧಿಕಾರವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

2025ರ ಅ.15ರಂದು ಬ್ರೈನ್‌ ಟ್ಯೂಮರ್‌ನಿಂದ 32 ವರ್ಷದ ಮಗ ಮೃತನಾಗಿದ್ದು, ಪತಿಯ ಸಹೋದರ ಅವಿವಾಹಿತ. ನಮ್ಮ ಕುಟುಂಬದಲ್ಲಿ ಮಕ್ಕಳಿಲ್ಲದಂತಾಗಿದೆ. ನಮಗೆ 60 ವರ್ಷದಾಟಿದೆ. ಆದರೆ, ಮತ್ತೊಂದು ಮಗು ಪಡೆಯುವ ಹಂಬಲ ಇದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಈ ವಯಸ್ಸಿನಲ್ಲಿ ಮಗು ಪಡೆಯಲಿರುವ ಸಾಧ್ಯತೆ ಅರಿಯಲು ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದು, ವೈದ್ಯರು ಪತ್ನಿ ಮುಟ್ಟು ನಿಲ್ಲುವ ವಯಸ್ಸು ತಲುಪಿದ್ದಾರೆ. ಹಾಗಾಗಿ ದಾನಿ ಮೊಟ್ಟೆಗಳೊಂದಿಗೆ ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಸಲಹೆ ನೀಡಿ ಪ್ರಮಾಣ ಪತ್ರ ವಿತರಿಸಿದ್ದಾರೆ. ಸರೋಗಸಿ ಚಿಕಿತ್ಸೆ ಪಡೆಯಲು ಪ್ರತಿವಾದಿಗಳ ಅಥವಾ ನ್ಯಾಯಾಲಯದ ಅನುಮತಿ ಪಡೆಯುವಂತೆ ವೈದ್ಯರು ತಿಳಿಸಿದ್ದಾರೆ ಎಂದು ಅರ್ಜಿದಾರರು ವಿವರಿಸಿದ್ದಾರೆ.

ವೈದ್ಯರ ಸಲಹೆಯಂತೆ 2025ರ ನ.13ರಂದು ಸರೋಗಸಿ ಚಿಕಿತ್ಸೆಗೆ ಒಳಗಾಗಲು ಅನುಮತಿ ಕೋರಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದೆವು. ಆದರೆ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ ಸೆಕ್ಷನ್‌ 4 ಅಡಿ ನಿಗದಿಪಡಿಸಿರುವ 50 ವರ್ಷ ಮೀರಿರುವ ಕಾರಣಕ್ಕೆ ಬಾಡಿಗೆ ತಾಯ್ತತನದಿಂದ ಮಗು ಪಡೆಯಲು ಅರ್ಹರಲ್ಲ ಎಂದು ಪ್ರಾಧಿಕಾರ ಅನುಮತಿ ನಿರಾಕರಿಸಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ವಯಸ್ಸು ಮೀರಿದ್ದರೂ ಮಗುವಿನ ಆರೈಕೆ ಮತ್ತು ಉತ್ತಮ ಭವಿಷ್ಯ ರೂಪಿಸಲು ನಾವು ದೈಹಿಕ, ವೈದ್ಯಕೀಯ ಮತ್ತು ಆರ್ಥಿಕವಾಗಿ ಸದೃಢರಾಗಿದ್ದೇವೆ. ವಾರ್ಷಿಕ 48 ಲಕ್ಷ ರೂ. ಆದಾಯವಿದೆ. ಬೇಕಾದಷ್ಟು ಹಣವಿದೆ. ಮಗುವಿನ ಹೆಸರಿನಲ್ಲಿ ನ್ಯಾಯಾಲಯ ಅಥವಾ ಸರ್ಕಾರ ಸೂಚಿಸುವ ಹಣ ಠೇವಣಿ ಇಡಲು ಸಿದ್ಧರಿದ್ದೇವೆ. ಬಾಡಿಗೆ ತಾಯ್ತತನದಿಂದ ಮಗು ಪಡೆಯಲು ಅನುಮತಿ ನೀಡಲು ಪ್ರತಿವಾದಿಗಳಿಗೆ ಸೂಚಿಸುವಂತೆ ಅರ್ಜಿದಾರರು ಹೈಕೋರ್ಟ್‌ಗೆ ಕೋರಿದ್ದಾರೆ.

ಅರ್ಜಿ ವಿಚಾರಣೆ ವೇಳೆ ಪ್ರತಿವಾದಿಗಳ ಪರ ವಕೀಲರುಕಾಯ್ದೆಯಲ್ಲಿ ಅವಕಾಶವಿಲ್ಲದ ಸಂದರ್ಭದಲ್ಲಿ ಅರ್ಜಿದಾರರ ಮನವಿ ಪರಿಗಣಿಸಲಾಗದು ಎಂದು ಆಕ್ಷೇಪಿಸಿದರು. ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ‘ಇದು ಕಾಯ್ದೆ, ಕಾನೂನಡಿ ಪರಿಗಣಿಸುವ ಪ್ರಕರಣವಲ್ಲ. ಮಾನವೀಯತೆಯಿಂದ ಕಾಣಬೇಕಾದ ಪ್ರಕರಣ. ಮೊದಲು ನೋಟಿಸ್‌ ಸ್ವೀಕರಿಸಿ ಅರ್ಜಿಗೆ ನಿಮ್ಮ ಆಕ್ಷೇಪಣೆ ಸಲ್ಲಿಸಿ. ನಂತರ ಕಾನೂನಿನ ಅವಕಾಶಗಳನ್ನು ನೋಡೋಣ’ ಪ್ರತಿವಾದಿ ವಕೀಲರಿಗೆ ಸೂಚಿಸಿದರು.

Related Posts

Leave a Reply

Your email address will not be published. Required fields are marked *