ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಒಟ್ಟು ಎಂಟು ಮಕ್ಕಳು ಮೃತಪಟ್ಟಿದ್ದಾರೆ. ಔಷಧವು ವಿಷಯುಕ್ತವಾಗಿರಬಹುದು ಎಂಬ ಅನುಮಾನ ಪೋಷಕರು ಮತ್ತು ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಸಿರಪ್ ಸೇವಿಸಿದ ಒಬ್ಬ ಹಿರಿಯ ವೈದ್ಯರೂ ಪ್ರಜ್ಞಾಹೀನ ಆಗಿರುವುದಾಗಿ ವರದಿಯಾಗಿದೆ.
ಮಧ್ಯಪ್ರದೇದ ಛಿಂದ್ವಾರಾ ಜಿಲ್ಲೆಯಲ್ಲಿ ಆರು ಮಕ್ಕಳು ಸಿರಪ್ ಸೇವಿಸಿದ ಬಳಿಕ ಅಸು ನೀಗಿದ್ದಾರೆ. ಸೆಪ್ಟೆಂಬರ್ 4ರಿಂದ 26ರ ನಡುವೆ ಎರಡು ರೀತಿಯ ಕೆಮ್ಮಿನ ಸಿರಪ್‌ಗಳನ್ನು ಸೇವಿಸಿದ ಒಂದರಿಂದ ಏಳು ವರ್ಷದ ಆರು ಮಕ್ಕಳು ಕಿಡ್ನಿ ಸಂಬಂಧಿತ ಸಮಸ್ಯೆಗಳು ಮತ್ತು ಮೂತ್ರ ಉತ್ಪಾದನೆ ಕೊರತೆಯಿಂದ ಮೃತಪಟ್ಟಿದ್ದಾರೆ. ಈ ಮಕ್ಕಳಿಗೆ ನೀಡಲಾಗಿದ್ದ ಸಿರಪ್ ಸಾಮಾನ್ಯವಾಗಿತ್ತು ಎಂಬುದು ದೃಢಪಟ್ಟಿದೆ.
ಮಧ್ಯಪ್ರದೇಶ ಸರ್ಕಾರವು ಈ ಔಷಧಗಳನ್ನು ಶಿಫಾರಸು ಮಾಡದಂತೆ ವೈದ್ಯರಿಗೆ ಸೂಚನೆ ನೀಡಿದೆ, ಅವುಗಳ ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ವಿಧಿಸಿದೆ. ರಾಜಸ್ಥಾನದಲ್ಲಿ ಬಯಾನಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾಕ್ಟರ್ ತಾರಾಚಂದ್ ಯೋಗಿ ಸೆಪ್ಟೆಂಬರ್ 24ರಂದು ಈ ಸಿರಪ್ ಸೇವಿಸಿದರು. ಸೇವಿಸಿದ ಎಂಟು ಗಂಟೆ ನಂತರ ಅವರು ತಮ್ಮ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಹೇಳಲಾಗಿದೆ.
ರಾಜಸ್ಥಾನ ಸರ್ಕಾರವು ಸಿರಪ್‌ನ 22 ಬ್ಯಾಚ್‌ಗಳನ್ನು ನಿಷೇಧಿಸಿದೆ ಮತ್ತು ಮಾರುಕಟ್ಟೆಯಲ್ಲಿರುವ ಎಲ್ಲಾ ದಾಸ್ತಾನುಗಳನ್ನು ವಾಪಸ್ ತರಿಸಲು ಮತ್ತು ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ. ಜುಲೈ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ರಾಜ್ಯದಾದ್ಯಂತ ಈ ಸಿರಪ್‌ನ 1.33 ಲಕ್ಷ (133,000) ಬಾಟಲಿಗಳನ್ನು ವಿತರಿಸಲಾಗಿತ್ತು. ಇವುಗಳಲ್ಲಿ 8,200 ಬಾಟಲಿಗಳು ಜೈಪುರದ ಸವಾಯ್ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಇನ್ನೂ ಉಳಿದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.