ಖಾದ್ಯ ತೈಲ ತಯಾರಕರು, ಸಂಸ್ಕರಣಾ ಘಟಕಗಳು, ಮಿಶ್ರಣಕಾರರು, ಮರು-ಪ್ಯಾಕರ್‌ಗಳು ಮತ್ತಿತರ ಪಾಲುದಾರರ ನೋಂದಣಿ ಕಡ್ಡಾಯವಾಗಿದೆ. ಆನ್‌ಲೈನ್ ಪೋರ್ಟಲ್ ಮೂಲಕ ಮಾಸಿಕ ಉತ್ಪಾದನೆ ಮತ್ತು ಸ್ಟಾಕ್ ರಿಟರ್ನ್ ಸಲ್ಲಿಕೆ ಕೂಡ ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಖಾದ್ಯ ತೈಲ ವಲಯದಲ್ಲಿ ಹೆಚ್ಚಿನ ನಿಯಂತ್ರಣ, ಮೇಲ್ವಿಚಾರಣೆ ಮತ್ತು ಪಾರದರ್ಶಕತೆಗಾಗಿ ಕೇಂದ್ರ ಸರ್ಕಾರ 2011ರ VOPPA ಆದೇಶಕ್ಕೆ ತಿದ್ದುಪಡಿ ತಂದಿದ್ದು, ಪಾಲಿಸದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.
ಎಲ್ಲಾ ಖಾದ್ಯ ತೈಲಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿರುವ ಘಟಕಗಳು https://www.nsws.gov.in ನಲ್ಲಿ ರಾಷ್ಟ್ರೀಯ ಏಕ ಗವಾಕ್ಷಿ ಮೂಲಕ ನೋಂದಾಯಿಸಿಕೊಳ್ಳಬೇಕು. ಬಳಿಕ ಘಟಕಗಳು ಮಾಸಿಕ ಉತ್ಪಾದನೆ, ಸ್ಟಾಕ್ ಮತ್ತು ಲಭ್ಯತೆಯ ರಿಟರ್ನ್‌ಗಳನ್ನು https://www.edibleoilindia.in ಮೂಲಕ ಸಲ್ಲಿಸಬೇಕು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಖಾದ್ಯ ತೈಲ ವಲಯದಲ್ಲಿ ನಿಖರ ದತ್ತಾಂಶ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ನೀತಿಗಳ ಸುಧಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ತಪಾಸಣೆ ಮತ್ತು ಕ್ಷೇತ್ರ ಪರಿಶೀಲನೆಗೆ ಆದ್ಯತೆ ನೀಡಿದೆ. ತೈಲ ಉತ್ಪನ್ನಗಳು, ಉತ್ಪಾದನೆ ಮತ್ತು ಲಭ್ಯತೆ ಬಗೆಗಿನ ಕ್ರಮವನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
VOPPA ತಿದ್ದುಪಡಿ ಆದೇಶ-2025 ಅನ್ನು ಪಾಲಿಸದಿದ್ದರೆ, ನೋಂದಣಿ, ರಿಟರ್ನ್ ಸಲ್ಲಿಸಲು ವಿಫಲವಾದರೆ ತೈಲ ಘಟಕಗಳ ವಿರುದ್ಧ ದಂಡ ವಿಧಿಸುವ ಜತೆಗೆ VOPPA ಆದೇಶ ಉಲ್ಲಂಘನೆ ಎಂದು ಪರಿಗಣಿಸಿ ಕಾಯ್ದೆ 2008ರ ನಿಬಂಧನೆಯಡಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.