ಈಗಾಗಲೇ ಇಡಿ ವಶದಲ್ಲಿರುವ ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಗೆ ಮತ್ತೆ ಇಡಿ ಶಾಕ್ ನೀಡಿದೆ, ಚಳ್ಳಕೆರೆ ಪಟ್ಟಣದಲ್ಲಿರುವ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬೆಳವಣಿಗೆ ವೀರೇಂದ್ರ ಪ್ಪಿಯ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಮನೆಯಲ್ಲಿ ಶೋಧ ನಡೆಸಿರುವ ಇಡಿ ತಂಡವು ಕಾರುಗಳ ಜಪ್ತಿ ಸೇರಿ ಇತರ ಪ್ರಕ್ರಿಯೆ ಕೈಗೊಂಡಿದ್ದಾರೆ.
ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ವೀರೇಂದ್ರ ಪಪ್ಪಿ ಶ್ರೀಲಂಕಾ, ನೇಪಾಳ ಮತ್ತು ಜಾರ್ಜಿಯಾ ದೇಶಗಳ ಕೆಲವು ಶೆಲ್ ಕಂಪನಿಗಳು ಮತ್ತು ಕ್ಯಾಸಿನೊಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ.
ಸೈಬರ್ ವಂಚನೆಯಿಂದ ಗಳಿಸಿದ ಹಣವನ್ನು ಬಳಸಿಕೊಂಡು ಕ್ರೆಡಿಟ್ ಕಾರ್ಡ್ ಪಾವತಿ ತೋರಿಸುವ ಮೂಲಕ ವೀರೇಂದ್ರಗೆ ಸೇರಿದ ಕ್ಯಾಸಿನೋಗಳ ನಗದನ್ನು ಕಾನೂನು ಬದ್ಧ ಆದಾಯವಾಗಿ ಪರಿವರ್ತಿಸಿರುವ ಅನುಮಾನಗಳು ದಟ್ಟವಾಗಿವೆ. ಇಡಿ ಶೋಧದ ವೇಳೆ ವೀರೇಂದ್ರ ಸಾಗರೋತ್ತರ ವ್ಯವಹಾರ ನಡೆಸುತ್ತಿರುವ ಸಂಬಂಧ ಕೆಲವು ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಅಧಿಕಾರಿಗಳು ಶೆಲ್ ಕಂಪನಿಗಳು ಹಾಗೂ ಸಾಗರೋತ್ತರ ವ್ಯವಹಾರದ ಬಗ್ಗೆ .ವೀರೇಂದ್ರ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ.