ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 12 ಪ್ಯಾರಾ ಮಿಲಿಟರಿ ಶಸಸ್ತ್ರ ತಂಡದೊಂದಿಗೆ ಸುಮಾರು 6 ಅಧಿಕಾರಿಗಳ ತಂಡ ಇಡಿ ಅಧಿಕಾರಿ ಕೇಶವ್ ನೇತೃತ್ವದಲ್ಲಿ ದಾಳಿ ಮಾಡಿದೆ.
ದಾಳಿ ವೇಳೆ ಶಾಸಕರು ಮತ್ತು ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಇರುವ ಕೆಲಸದವರ ವಿಚಾರಣೆ ನಡೆಸುತ್ತಿದ್ದು, ಶಾಸಕರಿಗೂ ಬರುವಂತೆ ತನಿಖಾ ತಂಡ ಬುಲಾವ್ ನೀಡಿದೆ.
ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅದಿರು ಸಾಗಾಟ ನಡೆಸುತ್ತಿದ್ದ ಸತೀಶ್ ಸೈಲ್ ಈ ಹಿಂದೆ ಆಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಈ ಕುರಿತು ಈ ಹಿಂದೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ತಂಡದಿಂದ ದೂರು ದಾಖಲಿಸಲಾಗಿತ್ತು. ಜನಪ್ರತಿನಿಧಿಗಳ ನ್ಯಾಯಾಲದಿಂದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹೈಕೋರ್ಟ್ ಮೂಲಕ ಜಾಮೀನು ಪಡೆದು ಸತೀಶ್ ಸೈಲ್ ಹೊರಬಂದಿದ್ದರು. ಇನ್ನು ಆದಾಯಕ್ಕಿಂತ ಅಧಿಕ ಹಣ ಮಾಡಿರುವ ಆರೋಪ ಇವರ ಮೇಲೆ ಇದ್ದು, ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಹೊಸಪೇಟೆಯಗಣಿ ಉದ್ಯಮಿಗಳಾದ ಸ್ವಸ್ತಿಕ್ ನಾಗರಾಜ್ ಹಾಗೂ ಕಾಂಗ್ರೆಸ್ ನಗರಸಭೆ ಸದಸ್ಯ ಕಾರದಪುಡಿ ಮಹೇಶಗೆ ಸೇರಿದ ಮನೆ, ಅಂಗಡಿ, ಕಚೇರಿ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸ್ವಸ್ತಿಕ್ ನಾಗರಾಜ್‌ಗೆ ಸೇರಿದ ಹೊಸಪೇಟೆಯ ಎಂಜೆ ನಗರದ ಮನೆ, ಎಪಿಎಂಸಿಯ ಬಳಿ ಇರೋ ಸ್ಟೀಲ್ ಅಂಗಡಿ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿದೆ.