ನವದೆಹಲಿ: ದೇಶದ ಒಕ್ಕೂಟ ವ್ಯವಸ್ಥೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಮಿತಿ ಮೀರಿದ್ದೀರಿ ಎಂದು ಜಾರಿ ನಿರ್ದೇಶನಾಲಯ (ಇಡಿ)ಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ನೀಡಿಕೆಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ತಮಿಳುನಾಡಿನಲ್ಲಿ ಸರ್ಕಾರಿ ಒಡೆತನದ ಮದ್ಯ ಮಾರಾಟ ಮಳಿಗೆಗಳ ಮೇಲೆ ಇಡಿ ದಾಳಿ ನಡೆಸಿರುವುದನ್ನು ಸುಪ್ರೀಂಕೋರ್ಟ್ ಆಕ್ಷೇಪಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ಪೀಠ ಗುರುವಾರ ನೀವು ಸಂಸ್ಥೆಗಳ ಮೇಲೆ ದೂರು ದಾಖಲಿಸಿಕೊಳ್ಳುವ ಬದಲು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ನೋಟಿಸ್ ಕೊಡುತ್ತಿದ್ದೀರಿ. ಇದು ನಿಮ್ಮ ಇತಿಮಿತಿಗಳನ್ನು ಮೀರುತ್ತಿರುವುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಜಾರಿ ನಿರ್ದೇಶನಾಲಯದ ತನಿಖೆಗೆ ಮುಂದಿನ ಆದೇಶದವರೆಗೂ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಸುಪ್ರೀಂಕೋರ್ಟ್ ಆದೇಶಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮದ್ಯ ಮಾರಾಟ ಸರಕು ಮಾರಾಟಗಾರರು ಮತ್ತು ಚಿಲ್ಲರೆ ಮಾರಾಟಗಾರರ ಪ್ರಾಬಲ್ಯ ತೊಡೆದುಹಾಕಲು ತಮಿಳುನಾಡು ಸರ್ಕಾರ ಮದ್ಯ ಮಾರಾಟ ಕಾರ್ಪರೇಷನ್ ಆರಂಭಿಸಿದ್ದು, ಈ ಮೂಲಕ ಮದ್ಯ ಮಾರಾಟಗಾರರಿಗೆ ಲೈಸೆನ್ಸ್ ನೀಡುವ ಮೂಲಕ ಶಿಸ್ತುಬದ್ಧ ಮಾರಾಟಕ್ಕೆ ಚಾಲನೆ ನೀಡಿತ್ತು.
ಲೈಸೆನ್ಸ್ ನೀಡಿಕೆಯಲ್ಲಿ ಅಕ್ರಮ ಆಗಿದೆ ಎಂದು ಆರೋಪಿಸಿ ಇಡಿ ದಾಳಿ ಮಾಡಿದ್ದು, 1000 ಕೋಟಿ ರೂ. ನಗದು ವಶಪಡಿಸಿಕೊಂಡಿತ್ತು.