ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಡೆಯುತ್ತಿರುವ ತನಿಖೆಯ ಹಿನ್ನೆಲೆಯಲ್ಲಿ ಇಡಿ 3,000 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಈ ಆಸ್ತಿಗಳು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಶನ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಮತ್ತು ಸಂಬಂಧಿತ ಘಟಕಗಳ ಹೆಸರಲ್ಲಿ ಇವೆ. ಮುಂಬೈ, ದೆಹಲಿ, ನೋಯ್ಡಾ, ಗೋವಾ, ಪುಣೆ, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿರುವ ಫ್ಲಾಟ್‌ಗಳು, ಕಚೇರಿಗಳು ಮತ್ತು ಪ್ಲಾಟ್‌ಗಳು ಇದರಲ್ಲಿ ಸೇರಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ಅನಿಲ್ ಅಂಬಾನಿಯವರ ಪಾಳಿ ಹಿಲ್ ನಿವಾಸಕ್ಕೂ ಇಡಿ ಅಧಿಕಾರಿಗಳು ಭೇಟಿ ನೀಡಿದ್ದು, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದೆಹಲಿಯ ಹೋಟೆಲ್ ರಂಜಿತ್ ಪ್ರದೇಶದಲ್ಲಿರುವ ರಿಲಯನ್ಸ್ ಸೆಂಟರ್ ಕಚೇರಿಯನ್ನೂ ಇಡಿ ಜಪ್ತಿ ಮಾಡಿದೆ. ಈ ಕಚೇರಿ ರಾಮಲೀಲಾ ಮೈದಾನ ಮತ್ತು ರಂಜಿತ್ ಸಿಂಗ್ ಫ್ಲೈಓವರ್ ನಡುವೆ ಮಹಾರಾಜ ರಂಜಿತ್ ಸಿಂಗ್ ಮಾರ್ಗದಲ್ಲಿ ಮೂರು ಏಕರೆ ಪ್ರದೇಶದಲ್ಲಿ ಹರಡಿಕೊಂಡಿದೆ ಎಂದು ಹೇಳಲಾಗಿದೆ. 20,000 ಕೋಟಿಗೂ ಹೆಚ್ಚು ಬ್ಯಾಂಕ್ ಹಣದ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂಸ್ಥೆಯು ಮುಟ್ಟುಗೋಲು ಹಾಕಿಕೊಂಡ ಪ್ರಮುಖ ಆಸ್ತಿಗಳಲ್ಲಿ ಇದೂ ಒಂದಾಗಿದೆ.
ಅನಿಲ್ ಅಂಬಾನಿಯವರ ರಿಲಯನ್ಸ್ ಗ್ರೂಪ್ ಇಡಿ ದಾಳಿ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ಸಂಸ್ಥೆ ಹಣಕಾಸು ಅಕ್ರಮದಲ್ಲಿ ತಾವು ಭಾಗಿಯಾಗಿಲ್ಲವೆಂದು ಸ್ಪಷ್ಟಪಡಿಸಿತ್ತು. ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ, ತನಿಖಾ ಸಂಸ್ಥೆಗಳಿಗೆ ಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದಿತ್ತು.


