ಬೆಟ್ಟಿಂಗ್ ಆ್ಯಪ್ಗಳ ವಿರುದ್ಧ ಕ್ರಮ ಕೈಗೊಂಡಿರುವ ಇಡಿ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ನಟಿ ನಿಧಿ ಅಗರ್ವಾಲ್, ಅನನ್ಯ ನಾಗಲ್ಲ, ನಿರೂಪಕಿ ಶ್ರೀಮುಖಿ ಸೇರಿ 29 ನಟರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.
ಕೆಲವು ನಟರಿಗೆ ಈಗಾಗಲೇ ನೋಟಿಸ್ ಕಳುಹಿಸಿ ವಿಚಾರಣೆಗಾಗಿ ಹಾಜರಾಗಲು ಸೂಚನೆ ನೀಡಲಾಗಿದೆ. ವಿಜಯ್ ದೇವರಕೊಂಡ, ರಾಣಾ, ಮಂಚು ಲಕ್ಷ್ಮಿ ಈ ಹಿಂದೆ ಹಲವು ಆನ್‌ಲೈನ್ ಪ್ರಚಾರ ಅಭಿಯಾನಗಳಲ್ಲಿ ಭಾಗಿಯಾಗಿದ್ದರು. ತೆಲಂಗಾಣದ ಸೈಬಾರಬಾದ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಅನ್ವಯ 29 ನಟರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದೆ.
ಇದು ಆರ್ಥಿಕ ಅಪರಾಧಗಳು ಮತ್ತು ಮನಿ ಲಾಂಡರಿಂಗ್‌ಗೆ ಸಂಬಂಧಿಸಿದೆ ಎಂದು ಇಡಿ ಶಂಕಿಸಿದೆ. ಮಿಯಾಪುರದ ವ್ಯಾಪಾರಿಫಣೀಂದ್ರ ಶರ್ಮಾ ದಾಖಲಿಸಿದ ದೂರಿನ ಆಧಾರದ ಮೇಲೆ ಸೈಬರಾಬಾದ್ ಪೊಲೀಸರು ಈ ಎಫ್‌ಐಆರ್ ದಾಖಲಿಸಿದ್ದಾರೆ. ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಬೆಟ್ಟಿಂಗ್ ಆಪ್‌ಗಳ ಪ್ರಚಾರ ಮಾಡುವ ಮೂಲಕ ಜನರನ್ನು ಆಕರ್ಷಿಸಿ ಆರ್ಥಿಕ ನಷ್ಟಕ್ಕೆ ಒಳಗಾಗುವಂತೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜಂಗಲ್ ರಮ್ಮಿ, ಎ23, ಜೀತ್‌ವಿನ್, ಯೋಲೋ247, ಫೇರ್‌ಪ್ಲೇ ಲೈವ್ ಮುಂತಾದವುಗಳ ಪ್ರಚಾರಗಳು ಯುವಕರನ್ನು ಆರ್ಥಿಕವಾಗಿ ದುರ್ಬಲರನ್ನು ಗುರಿಯಾಗಿಸಿ ಸಂಕಷ್ಟಕ್ಕೆ ದೂಡಿವೆ ಎಂದು ವಿವರಿಸಲಾಗಿದೆ. ಇಡಿ ಪ್ರಕರಣವನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ ಅಡಿ ತನಿಖೆ ನಡೆಸುತ್ತಿದೆ. ಈ ಸೆಲೆಬ್ರಿಟಿಗಳಿಗೆ ಈಗಾಗಲೇ ನೋಟಿಸ್‌ಗಳನ್ನು ಕಳುಹಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಿದ್ದು, ತಾವು ಎ23 ಎಂಬ ಕೌಶಲ್ಯ ಆಧಾರಿತ ಗೇಮಿಂಗ್ ಪ್ಲಾಟ್‌ಫಾರ್ಮ್‌ಗೆ ಮಾತ್ರ ಬ್ರಾಂಡ್ ಅಂಬಾಸಿಡರ್ ಆಗಿರುವುದಾಗಿ ತಿಳಿಸಿದ್ದಾರೆ. ಈ ಗೇಮ್‌ಗಳನ್ನು ಸುಪ್ರೀಂ ಕೋರ್ಟ್ ಕೌಶಲ್ಯ ಆಧಾರಿತ ಆಟಗಳೆಂದು ಗುರುತಿಸಿದೆ ಎಂದು ತಂಡ ಹೇಳಿದೆ.
ರಾಣಾ ದಗ್ಗುಬಾಟಿ ಕೂಡ ಈ ಒಪ್ಪಂದ 2017 ರಲ್ಲಿ ಮುಕ್ತಾಯಗೊಂಡಿದೆ ಎಂದು ಹೇಳಿದ್ದಾರೆ. ಎಲ್ಲಾ ಪ್ರಚಾರಗಳು ಕಾನೂನುಬದ್ಧವಾಗಿ ಅನುಮತಿಸಲಾದ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದವು ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕಾಶ್ ರಾಜ್ 2016 ರಲ್ಲಿ ಜಂಗಲ್ ರಮ್ಮಿ ಜಾಹೀರಾತಿನಲ್ಲಿ ಭಾಗವಹಿಸಿದ್ದೆ ಎಂದು ಒಪ್ಪಿಕೊಂಡಿದ್ದಾರೆ, ಆದರೆ ಒಂದು ವರ್ಷದೊಳಗೆ ಒಪ್ಪಂದವನ್ನು ಮುಂದುವರಿಸದಿರಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.