ದೆಹಲಿ-ಎನ್‌ಸಿಆರ್ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ಇಂದು (ಸೋಮವಾರ) ಪ್ರಬಲ ಭೂಕಂಪನದ ಅನುಭವ ಆಗಿದೆ. ರಾಷ್ಟ್ರೀಯ ಭೂಕಂಪ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0 ರಷ್ಟಿತ್ತು.
ಭೂಕಂಪದ ಕೇಂದ್ರಬಿಂದು ಧೌಲಾ ಕುವಾನ್ ಬಳಿಯ ಸರೋವರ ಉದ್ಯಾನವನದ ಬಳಿ ಇತ್ತು. ಕಂಪನದ ತೀವ್ರತೆಗೆ ಕಟ್ಟಡಗಳು ನಡುಗಲು ಪ್ರಾರಂಭಿಸಿದವು ಮತ್ತು ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು. ಮರಗಳ ಮೇಲೆ ಕುಳಿತಿದ್ದ ಪಕ್ಷಿಗಳು ಕೂಡ ಚೀರುತ್ತ ಹಾರಾಡಿವೆ. ಭೂಕಂಪನದ ಕೇಂದ್ರಬಿಂದು ನವದೆಹಲಿಯಲ್ಲಿ ನೆಲದಿಂದ ಐದು ಕಿಲೋಮೀಟರ್ ಆಳದಲ್ಲಿತ್ತು. ಹೀಗಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ಪರಿಣಾಮ ಹೆಚ್ಚು ಅನುಭವಕ್ಕೆ ಬಂದಿದೆ.
ಉತ್ತರ ಪ್ರದೇಶದ ಮೊರಾದಾಬಾದ್, ಸಹರಾನ್‌ಪುರ, ಅಲ್ವಾರ್, ಮಥುರಾ ಮತ್ತು ಆಗ್ರಾದಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಹರಿಯಾಣದ ಕುರುಕ್ಷೇತ್ರ, ಹಿಸಾರ್, ಕೈಥಾಲ್‌ನಲ್ಲಿ ಕಂಪನದ ಅನುಭವವಾಗಿದೆ. ಯಾವುದೇ ರೀತಿಯ ಸಾವು ನೋವಿನ ವರದಿಯಾಗಿಲ್ಲ.
ಭೂಕಂಪನದ ಬಳಿಕ ದೆಹಲಿ ಪೊಲೀಸರು ತುರ್ತು ಸಹಾಯವಾಣಿ ಸಂಖ್ಯೆಯನ್ನು ನೀಡಿ, ತುರ್ತು ಸಹಾಯಕ್ಕಾಗಿ 112 ಗೆ ಕರೆ ಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
ಕಂಪನವು ತುಂಬಾ ಪ್ರಬಲವಾಗಿತ್ತು. ನನಗೆ ಈ ಮೊದಲು ಎಂದಿಗೂ ಈ ರೀತಿ ಅನುಭವ ಆಗಿಲ್ಲ. ಇಡೀ ಕಟ್ಟಡವು ನಡುಗುತ್ತಿತ್ತು ಎಂದು ಗಾಜಿಯಾಬಾದ್ ನಿವಾಸಿಯೊಬ್ಬರು ಹೇಳಿದ್ದಾರೆ. ಭೂಕಂಪವು ಅಲ್ಪಾವಧಿಯದ್ದಾಗಿತ್ತು, ಆದರೆ ಅದರ ತೀವ್ರತೆ ತುಂಬಾ ಹೆಚ್ಚಾಗಿತ್ತು. ರೈಲು ಅತಿ ವೇಗದಲ್ಲಿ ಬಂದಂತೆ ಭಾಸವಾಯಿತು ಎಂದು ದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಭೂಕಂಪದ ಬಗ್ಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಎಲ್ಲರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಎಲ್ಲರೂ ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಎಎಪಿ ನಾಯಕಿ ಅತಿಶಿ ಕೂಡ ಪೋಸ್ಟ್ ಮಾಡಿದ್ದಾರೆ.