ಅಮೆರಿಕದ ಅಲಾಸ್ಕಾದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.ಸಮುದ್ರದ 36 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಅಲಾಸ್ಕಾ ಪರ್ಯಾಯ ದ್ವೀಪದ ಸ್ಯಾಂಡ್ ಪಾಯಿಂಟ್‌ನಿಂದ 87 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಇತ್ತು ಎಂದು ತಿಳಿಸಿದೆ.
ಭೂಕಂಪದ ನಂತರ ದಕ್ಷಿಣ ಅಲಾಸ್ಕಾ ಹಾಗೂ ಪರ್ಯಾಯ ದ್ವೀಪದ ಭಾಗದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸಮುದ್ರದ ಕಡಿಮೆ ಆಳದಲ್ಲಿ ಸಂಭವಿಸಿದ ಭೂಕಂಪ ಇದಾಗಿದ್ದು, ಇಂತಹ ಭೂಕಂಪಗಳು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತವೆ.
ಮುಂಜಾಗ್ರತಾ ಕ್ರಮವಾಗಿ ಕರಾವಳಿಯ ಜನರು ಎತ್ತರದ ಪ್ರದೇಶಗಳಿಗೆ ಅಥವಾ ಇತರ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಬೇಕು. ಕಡಲತೀರದಿಂದ ದೂರವಿರಬೇಕು ಎಂದು ಅಮೆರಿಕ ರಾಷ್ಟ್ರೀಯ ಹವಾಮಾನ ಸೇವಾ ಕೇಂದ್ರ ಎಚ್ಚರಿಕೆ ನೀಡಿದೆ.
ದಕ್ಷಿಣ ಅಲಾಸ್ಕಾ ಹಾಗೂ ಅಲಾಸ್ಕಾ ಪರ್ಯಾಯ ದ್ವೀಪ ಸೇರಿದಂತೆ ಪೆಸಿಫಿಕ್ ಕರಾವಳಿ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಮೆರಿಕದ ಕೆಲವು ಕರಾವಳಿ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಈ ಬಾರಿಯ ಭೂಕಂಪನವು ತೀವ್ರವಾಗಿದ್ದು ಯಾವುದೇ ಕ್ಷಣದಲ್ಲಾದರೂ ಸುಮಾಮಿ ಎದುರಾಗುವ ಆತಂಕ ಎದುರಾಗಿದೆ.
ಅಲಾಸ್ಕಾವು ಸಕ್ರಿಯ ಭೂಕಂಪನ ಪ್ರದೇಶವಾದ ಪೆಸಿಫಿಕ್ ಸಾಗರದ ಉದ್ದಕ್ಕೂ ಆವರಿಸಿಕೊಂಡಿದೆ. ಈ ರಾಜ್ಯವು ಮಾರ್ಚ್ 1964 ರಲ್ಲಿ 9.2 ತೀವ್ರತೆಯ ಭೂಕಂಪಕ್ಕೆ ತುತ್ತಾಗಿತ್ತು. ಇದು ಪ್ರಬಲ ಭೂಕಂಪನವಾಗಿತ್ತು, ಹೆಚ್ಚಿನ ಸಂಖ್ಯೆಯಲ್ಲಿ ಸಾವುನೋವು ಸಂಭವಿಸಿತ್ತು. ಜುಲೈ 2023ರಲ್ಲಿ ಅಲಾಸ್ಕಾ ಪರ್ಯಾಯ ದ್ವೀಪದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು.