ಪಾಕಿಸ್ತಾನ ಸೇರಿದಂತೆ ಶುಕ್ರವಾರ ಬೆಳಗ್ಗೆಯೇ ಹಲವು ದೇಶಗಳಲ್ಲಿ ಭೂಮಿ ಕಂಪಿಸಿದೆ. ನೇಪಾಳದಲ್ಲಿ ಭೂಕಂಪನ ದಾಖಲಾದ ಕೆಲವೇ ಗಂಟೆಗಳಲ್ಲಿ ಪಾಕ್ ನಲ್ಲೂ ಭೂಕಂಪನ ಆಗಿದೆ. ಪಾಕಿಸ್ತಾನದಲ್ಲಿ ಬೆಳಗಿನ ಜಾವ 5.14ಕ್ಕೆ 4.5 ತೀವ್ರತೆಯ ಭೂಕಂಪ ದಾಖಲಾಗಿದೆ. ಭೂಕಂಪದ ಆಳ 10 ಕಿ.ಮೀ ದಾಖಲಾಗಿದೆ.
ಭೂಕಂಪಗಳು ಭೂಮಿಯ ಪದರಗಳ ಚಲನೆಯಿಂದ ಉಂಟಾಗುತ್ತವೆ. ಈ ಭೂಪದರಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಭೂಕಂಪಗಳು ಸಂಭವಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.
ನೇಪಾಳದ ಸಿಂಧುಪಾಲ್ಚೋಕ್ ಜಿಲ್ಲೆಯಲ್ಲಿ ಬೆಳಗ್ಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಹಿಮಾಲಯ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿಯೂ ಇದೇ ಅನುಭವ ಆಗಿದೆ. ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ 5.5 ಮ್ಯಾಗ್ನಿಟ್ಯೂಡ್ ತೀವ್ರತೆ ಇತ್ತು ಎಂದು ಹೇಳಿದೆ.
ಬಿಹಾರದ ಪಾಟ್ನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನಗಳು ಸ್ಪಷ್ಟವಾಗಿ ಅನುಭವಕ್ಕೆ ಬಂದಿವೆ. ಭೂಕಂಪಗಳಿಂದ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.