ಉತ್ತರ ಜಪಾನ್‌ನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ 7.5 ತೀವ್ರತೆಯ ಪ್ರಬಲ ಭೂಕಂಪದಲ್ಲಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೆಸಿಫಿಕ್ ಕರಾವಳಿ ಭಾಗಗಳಲ್ಲಿ 70 ಸೆಂಟಿಮೀಟರ್ ಸುನಾಮಿ ಅಲೆಗಳು ಅಬ್ಬರಿಸಿವೆ.
ಅಮೋರಿ ಕರಾವಳಿಯಲ್ಲಿ ಭೂಕಂಪ ಮತ್ತು ಸುನಾಮಿಯಿಂದ ಜಪಾನ್‌ನಲ್ಲಿ ಸಾಕಷ್ಟು ಹಾನಿಯಾಗಿದೆ. ಹೊನ್ಶುವಿನ ಉತ್ತರ ತುದಿಯಿಂದ 80 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದ್ದು, ಕರಾವಳಿ ಪಟ್ಟಣಗಳಿಗೆ ಸಣ್ಣ ಸುನಾಮಿ ಅಲೆಗಳು ಅಪ್ಪಳಿಸಿವೆ.
ಭೂಕಂಪ ಪೀಡಿತ 800 ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಶಿಂಕನ್ಸೆನ್ ಸೇವೆಗಳು ಮತ್ತು ಕೆಲವು ಸ್ಥಳೀಯ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮುಂದಿನ ಸೂಚನೆವರೆಗೆ ಜನರು ತಾವಿರುವ ಸ್ಥಳವನ್ನು ಬಿಟ್ಟು ಎಲ್ಲೂ ಹೋಗದಂತೆ ಮುಖ್ಯ ಸಂಪುಟ ಕಾರ್ಯದರ್ಶಿ ಮಿನೋರು ಕಿಹರಾ ಎಚ್ಚರಿಸಿದ್ದಾರೆ.
ಹಚಿನೋಹೆ ವಾಯುನೆಲೆಯಲ್ಲಿ 480 ಜನರು ಆಶ್ರಯ ಪಡೆದಿದ್ದಾರೆ. ರಕ್ಷಣಾ ಸಚಿವಾಲಯವು ಹಾನಿಯ ಸಮೀಕ್ಷೆ ಮಾಡಲು 18 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ ಎಂದು ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ತಿಳಿಸಿದ್ದಾರೆ.
ಸಾವಿರಾರು ಮಂದಿಯನ್ನು ಸುರಕ್ಷಿತ ಕಡೆಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ಹಸ ಸಾಹಸ ಪಡುತ್ತಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ನಿವಾಸಿಗಳು ಎತ್ತರದ ಪ್ರದೇಶಕ್ಕೆ ತೆರಳುವಂತೆ ಅಥವಾ ಮನೆಗಳಲ್ಲೇ ಉಳಿಯುವಂತೆ ಮುಖ್ಯ ಸಂಪುಟ ಕಾರ್ಯದರ್ಶಿ ಮಿನೊರು ಕಿಹರ ಸಲಹೆ ಮಾಡಿದ್ದಾರೆ.
ರಿಸ್ಥಿತಿಯ ಅವಲೋಕನ ಮತ್ತು ನಿಗಾಕ್ಕೆ ತುರ್ತು ಕಾರ್ಯಪಡೆ ರಚಿಸಲಾಗಿದೆ ಎಂದು ಪ್ರಧಾನಿ ಸನೇ ತಕೈಚಿ ಪ್ರಕಟಿಸಿದ್ದಾರೆ. ಜನರ ಜೀವರಕ್ಷಣೆಗೆ ಆದ್ಯತೆ ನೀಡಿ, ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪ್ರದೇಶದ ಅಣುಸ್ಥಾವರಗಳು ಸುರಕ್ಷಿತವಾಗಿವೆ ಎಂದು ಮೂಲಗಳು ತಿಳಿಸಿವೆ.


