Menu

ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ: ಡಿಕೆ ಶಿವಕುಮಾರ್

“ನಾವು ಗಳಿಸಿದ ಸಂಪತ್ತು ಕ್ಷಣಿಕ. ಆದರೆ ನಾವು ಪಡೆದ ಜ್ಞಾನ, ಮಾಡಿದ ಸಾಧನೆ ಶಾಶ್ವತ. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅವಮಾನ. ಅವಕಾಶ ಪಡೆದವನು ಅದೃಷ್ಟವಂತ, ಅವಕಾಶ ಸೃಷ್ಟಿಸಿಕೊಳ್ಳುವವನು ಬುದ್ದಿವಂತ” ಹೀಗೆ ಹಲವಾರು ನುಡಿಗಟ್ಟುಗಳನ್ನು ಹೇಳುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸಾಧನೆಯನ್ನು ಬಣ್ಣಿಸಿದರು.

ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನಿಸಿದ‌ ನಂತರ ಅವರು ಮಾತನಾಡಿದರು.

“ಅನೇಕ ಸಾಧಕರ ಜ್ಞಾನದ ಬಲದಿಂದ ಕರ್ನಾಟಕಕ್ಕೆ ಹೆಸರು ಬಂದಿದೆ. ದೇವರು ವರವನ್ನೂ ನೀಡುವುದಿಲ್ಲ, ಶಾಪವನ್ನೂ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾ‌ನೆ.‌ ಸಿಕ್ಕಂತಹ ಅವಕಾಶ ಬಳಸಿಕೊಂಡು ಸಾಧನೆ ಮಾಡಿದವರು ಇಂದು ನಮ್ಮ ಮುಂದಿದ್ದಾರೆ. ಕನ್ನಡವನ್ನು ಉಸಿರಾಡಿದ, ಬೆಳಗಿದ, ಕನ್ನಡದಲ್ಲಿ ಬದುಕಿದ ಸಾಧಕರಿವರು” ಎಂದರು.

“ಕಣ್ಣಲ್ಲಿ ಕೇಳಿದ್ದು ಸತ್ಯ ಆದರೆ ಕಿವಿಯಲ್ಲಿ ಕೇಳಿದ್ದು ಸುಳ್ಳು ಎನ್ನುವ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಪ್ರಶಸ್ತಿ ಪುರಸ್ಕೃತರಲ್ಲಿನ 13 ಜನ ಸಾಧಕರು ರಾಜ್ಯ ರಾಜಧಾನಿ ಬೆಂಗಳೂರನ್ನೇ ನೋಡಿಲ್ಲ. ಕಡು ಬಡತನದಲ್ಲಿ ಬೆಳೆದಿದ್ದರು ಸಹ ಕಲೆ ಹಾಗೂ ಜನರಿಗಾಗಿ ಬದುಕನ್ನೇ ತ್ಯಾಗ ಮಾಡಿದ್ದಾರೆ. ಪ್ರಶಸ್ತಿ ಪುರಸ್ಕೃತರಲ್ಲಿ ಎಲ್ಲಾ ಸ್ತರದವರೂ ಇದ್ದಾರೆ. ಹಿರಿಯರಿದ್ದಾರೆ. ಇಂತಹ ಚೇತನಗಳಿಗೆ ಸನ್ಮಾನ ಮಾಡುವ ಭಾಗ್ಯ ದೊರೆತಿದ್ದು ನನ್ನ ಭಾಗ್ಯ” ಎಂದು ಹೇಳಿದರು.

“ಪ್ರಶಸ್ತಿಗೆ ಭಾಜನರಾಗಿರುವ ಕೋಣಂದೂರು ಲಿಂಗಪ್ಪನವರು. ನಮ್ಮ ನಡುವಿನ ಹಿರಿಯ ಮುತ್ಸದ್ದಿ. ಇವರು, ಬಂಗಾರಪ್ಪನವರು ಹಾಗೂ ಕಾಗೋಡು ತಿಮ್ಮಪ್ಪನವರು ಮಾತಿಗೆ ನಿಂತರೆ ಇಡೀ ವಿಧಾನಸಭೆಯೇ ನಡುಗುತ್ತಿತ್ತು ಎಂದು ಆಗ ಹೇಳುತ್ತಿದ್ದರು. ಲಿಂಗಪ್ಪ ಅವರು ಶಾಂತವೇರಿ ಗೋಪಾಲಗೌಡರ ಶಿಷ್ಯರು. ಇವರು ಸದನದಲ್ಲಿ ಮಾತನಾಡಿದ್ದು, ಜನರ ಪರವಾಗಿ ಕೆಲಸ ಮಾಡಿದ್ದು ಇಂದಿಗೂ ದಾಖಲೆಗಳಾಗಿ ನಮ್ಮ ನಡುವೆ ಇದ್ದಾವೆ” ಎಂದು ತಿಳಿಸಿದರು.

“ಎಂ.ಎಸ್.‌ರಾಮಯ್ಯ ಅವರ ಮಗನಾದ ಎಂ.ಆರ್. ಜಯರಾಮ್ ಅವರು ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ಶ್ರೀಮಂತಿಕೆ ನೋಡಿ ನಾವು ಈ ಪ್ರಶಸ್ತಿ ನೀಡಿಲ್ಲ. 1978 ರಲ್ಲಿಯೇ ಶಾಸಕರಾಗಿ ಕೆಲಸ ಮಾಡಿದವರು. ವೈದ್ಯಕೀಯ ಕಾಲೇಜಿನ ಅಧ್ಯಕ್ಷರಾಗಿದ್ದರು. ಆದರೂ ಹಳ್ಳಿ, ಹಳ್ಳಿಗೆ ತೆರಳಿ ಭಜನೆ ಮಾಡಿಕೊಂಡು ತಾವು ನಂಬಿದ ಆಚರಣೆಯನ್ನು ತಿಳಿಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆ ನೀಡಿದವರಿವರು” ಎಂದು ಬಣ್ಣಿಸಿದರು.

“ಇನ್ನೊಬ್ಬ ಸಾಧಕರಾದ ಸೀತಾರಾಮ್ ಶೆಟ್ಟಿ ಅವರು ಎಂಜಿನಿಯರಿಂಗ್ ಪರಿಣಿತರು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗಕ್ಕೆ ನೀರು ತರಲು ಕಾಲುವೆ ನಿರ್ಮಾಣ‌ ಮಾಡಲಾಗುತ್ತಿದೆ. ಒಂದು ಕಡೆ ಸುಮಾರು 43 ಮೀ.‌ ಎತ್ತರದ, 10.5 ಕಿ.ಮೀ ಉದ್ದದ ಅಕ್ವಾಡೆಕ್ ವಿನ್ಯಾಸ ಮಾಡಿದ್ದಾರೆ. ಅದರ ಮೇಲೆ ಎರಡು ಲಾರಿಗಳು ಓಡಾಡಬಹುದು. ಅಷ್ಟು ಸುಂದರವಾದ ಹಾಗೂ ಭಾರತದಲ್ಲಿಯೇ ಮಾದರಿ ನಿರ್ಮಾಣ ಇದಾಗಿದೆ” ಎಂದರು.

“ನಾನು ಈ ಹಿಂದೆ ಬಂದೀಖಾನೆ ಸಚಿವನಾಗಿದ್ದ ವೇಳೆ ಆಗ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಎನ್.ಎಸ್.ರಾಮೇಗೌಡರು ಕಾರ್ಯನಿರ್ವಹಿಸುತ್ತಿದ್ದರು. ಆ ವೇಳೆಯಲ್ಲಿ ಅವರು ಜೈಲಿನಲ್ಲಿ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ತೆರೆದು ಕೈದಿಗಳೂ ಸಹ ಪದವಿ ಪಡೆಯುವ ವ್ಯವಸ್ಥೆ ಮಾಡಿದವರು. ಆಶಿಶ್ ಬಲ್ಲಾಳ್ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದವರು” ಎಂದು ಹೇಳಿದರು.

“ನಮ್ಮ‌ ನಡುವೆ ಇನ್ನೂ ಅನೇಕ ಸಾಧಕರಿದ್ದಾರೆ. ಆದರೆ ಆಯಾ ಆಚರಣೆ ವರ್ಷಕ್ಕೆ ತಕ್ಕಂತೆ ಪ್ರಶಸ್ತಿ ನೀಡಬೇಕು ಎನ್ನುವ ನಿಯಮವನ್ನು ಮಾಡಿಕೊಂಡಿರುವ ಕಾರಣಕ್ಕೆ ಈ ಬಾರಿ 70 ಸಾಧಕರನ್ನು ಗುರುತಿಸಲಾಗಿದೆ.‌ ಮುಂದಿನ ವರ್ಷ 71 ಜನ ಸಾಧಕರನ್ನು ಪರಿಗಣಿಸಲಾಗುವುದು. ಎಲ್ಲಾ ಸಮುದಾಯ, ಕ್ಷೇತ್ರ, ಜಿಲ್ಲೆಗಳ ಸಾಧಕರನ್ನು ಪರಿಗಣಿಸಲಾಗಿದೆ. ಯಾವುದೇ ಅರ್ಜಿ ಆಹ್ವಾನ ಮಾಡದೆ ನಿಜವಾದ ಸಾಧಕರನ್ನು ಗುರುತಿಸಲಾಗಿದೆ” ಎಂದು ತಿಳಿಸಿದರು.

“ನನಗೆ ಪ್ರಶಸ್ತಿ ದೊರಕಿಲಿಲ್ಲ ಎನ್ನುವ ಕೊರಗು ಬೇಡ. ಅದಕ್ಕೆ ಡಿವಿಜಿ ಅವರ ಕಗ್ಗ ನಮಗೆ ಉತ್ತಮ ಉದಾಹರಣೆ. ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ/ ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ/ ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ/ ತಾಣ ನಿನಗಿಹುದಿಲ್ಲಿ ಮಂಕುತಿಮ್ಮ. ಹೀಗೆ ಒಂದಲ್ಲ ಒಂದು ದಿನ ಎಲ್ಲರಿಗೂ ಅವಕಾಶ ಬರಲಿದೆ. ನಾವೆಲ್ಲರೂ ಕಾಯಬೇಕು” ಎಂಬರ್ಥದ ಕಗ್ಗವನ್ನು ಡಿಸಿಎಂ ಅವರು ವಾಚಿಸಿದರು.

Related Posts

Leave a Reply

Your email address will not be published. Required fields are marked *