ವೇಗವಾಗಿ ಬಂದ ಡಂಪರ್ ಟ್ರಕ್ ಕಾರುಗಳ ಮೇಲೆ ಉರುಳಿ ಬಿದ್ದಿದ್ದರಿಂದ 13 ಮಂದಿ ಮೃತಪಟ್ಟ ಘಟನೆ ರಾಜಸ್ಥಾನದ ಜೈಪುರದಲ್ಲಿ ಸಂಭವಿಸಿದೆ.
ಜೈಪುರದ ಲೋಹಮಂಡಿ ರಸ್ತೆಯಲ್ಲಿ ವೇಗವಾಗಿ ಬಂದ ಡಂಪರ್ ಟ್ರಕ್ ಎದುರಿಗೆ ಬರುತ್ತಿದ್ದ ಕಾರಿಗೆ ರಭಸವಾಗಿ ಡಿಕ್ಕಿ ಹೊಡೆಯಿತು. ನಂತರ, ಡಂಪರ್ ಮತ್ತೆರಡು ಕಾರುಗಳು ಮತ್ತು ಒಂದು ಪಿಕಪ್ ಟ್ರಕ್‌ಗೆ ಡಿಕ್ಕಿ ಹೊಡೆಯಿತು. ಸಮೀಪದಲ್ಲಿ ನಿಲ್ಲಿಸಿದ್ದ ಹಲವಾರು ಬೈಕ್‌ಗಳು ಟ್ರಕ್ ಕೆಳಗೆ ಬಿದ್ದು ನಜ್ಜುಗುಜ್ಜಾಗಿವೆ.
ಅಪಘಾತದಲ್ಲಿ ಇದುವರೆಗೆ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಜೈಪುರ ಆಯುಕ್ತ ಸಚಿನ್ ಮಿತ್ತಲ್ ದೃಢಪಡಿಸಿದ್ದಾರೆ. ಅಧಿಕಾರಿ ಉಷಾ ಶರ್ಮಾ ಮಾತನಾಡಿ, ಘಟನಾ ಸ್ಥಳದಲ್ಲಿ ಡಂಪರ್ ಟ್ರಕ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡವರನ್ನು ಸವಾಯಿ ಮಾನ್ಸಿಂಗ್ ಆಸ್ಪತ್ರೆಯ ಅಪಘಾತ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಹರ್ಮಾರ ಠಾಣೆಯ ಪೊಲೀಸರು ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯ ನಿವಾಸಿಗಳ ಸಹಾಯದಿಂದ, ಪೊಲೀಸರು ಟ್ರಕ್ ಮತ್ತು ಕಾರುಗಳಲ್ಲಿ ಸಿಕ್ಕಿಬಿದ್ದ ಜನರನ್ನು ಕಾಪಾಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಟ್ರಕ್ ಚಾಲಕ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಮತ್ತಿನಲ್ಲಿದ್ದ ಕಾರಣ ವಾಹನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


