ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಥಳಿರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ನಾಲ್ವರು ಬಸ್ ಕದ್ದು ಪರಾರಿಯಾಗಲು ಯತ್ನಿಸಿದಾಗ ಬಸ್ ನಿಯಂತ್ರಣ ತಪ್ಪಿ ವ್ಯಕ್ತಿ ಮತ್ತು ರಸ್ತೆ ಬದಿಯ ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿದೆ. ಬಸ್ ಮುಂಭಾಗ ಜಖಂ ಆಗಿದ್ದು, ರಾತ್ರಿ ವೇಳೆ ಜನ ಸಂಚಾರ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಎಂದಿನಂತೆ ಚಾಲಕ ಥಳಿ ರಸ್ತೆ ಬದಿ ಬಸ್ ಪಾರ್ಕ್ ಮಾಡಿ ಹೋಗಿದ್ದ. ಕುಡಿದ ಮತ್ತಿನಲ್ಲಿದ್ದ ನಾಲ್ವರು ಬಸ್ಸಿನ ವೈರ್ ಕಟ್ ಮಾಡಿ ಕದ್ದು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ನಿಯಂತ್ರಣ ಕಳೆದುಕೊಂಡ ಬಸ್ ಎರಡು ವಿದ್ಯುತ್ ಕಂಬಗಳು ಮತ್ತು ರಸ್ತೆಬಿದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಗುದ್ದಿದೆ.
ಸಾರ್ವಜನಿಕರು ಬಸ್ ತಡೆದು ನಿಲ್ಲಿಸಿದ್ದು, ಈ ವೇಳೆ ಮೂವರು ಕುಡುಕರು ಸ್ಥಳದಿಂದ ಓಡಲು ಪ್ರಯತ್ನಿಸಿದ್ದಾರೆ. ಸಿಕ್ಕಿಬಿದ್ದ ಒಬ್ಬ ಆರೋಪಿಯನ್ನು ಥಳಿಸಿ ಆನೇಕಲ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಬಸ್ ಅಡ್ಡಗಟ್ಟಿ ಪ್ರಯಾಣಿಕರಿಗೆ ಹಲ್ಲೆಗೈದವರು ಸೆರೆ
ಖಾಸಗಿ ಬಸ್ ಅಡ್ಡಗಟ್ಟಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿಗಳನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿಯ ಕಮ್ಮಸಂದ್ರದ ಚರಣ್ ಮತ್ತು ಮದನ್ ಬಂಧಿತರು. ಕುಡಿದ ಮತ್ತಿನಲ್ಲಿ ಪೆಟ್ರೋಲ್ ಬಂಕ್ ಒಳಗೆ ವ್ಹೀಲಿಂಗ್ ಮಾಡಿಕೊಂಡು ಬಂದಿದ್ದ ಆರೋಪಿಗಳು ಬಸ್ಸಿಗೆ ನುಗ್ಗಿ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಯ ದೃಶ್ಯ ವೈರಲ್ ಆಗಿದ್ದು, ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.


