ಬೆಟಗೇರಿ ಪೊಲೀಸ್ ಠಾಣೆಗೆ ಕುಡಿದ ಮತ್ತಿನಲ್ಲಿ ಬಂದು ಐಪಿಎಸ್ ಅಧಿಕಾರಿ ಅನಿತಾ ಹದ್ದಣ್ಣವರ್ ಅವರ ಸೋದರ ಅಕ್ಷತ್ ಹದ್ದಣ್ಣವರ್ ಹಾಗೂ ಸಹಚರ ರಾತ್ರಿಯಿಡೀ ಹೈಡ್ರಾಮಾ ಮಾಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ರೌಡಿ ರೀತಿ ವರ್ತಿಸಿದ ಅಕ್ಷತ್ ಹಾಗೂ ಸಹಚರನನ್ನು ಸ್ಥಳೀಯರು ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಏಕಾಏಕಿ ಕಾರ್‌ನಲ್ಲಿ ಬಂದು ಪೊಲೀಸ್ ಠಾಣೆಗೆ ನುಗ್ಗಿ, ನಾನು ವಕೀಲ ಯಾರು ಏನು ಮಾಡ್ತಿರಿ ಎಂದು ಠಾಣೆಯ ಬಳಿಯಿದ್ದ ಸ್ಥಳೀಯರ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ.
ಸಿಪಿಐ, ಪಿಎಸ್‌ಐ ವಾಹನ ನಿಲ್ಲಿಸುವ ಸ್ಥಳದಲ್ಲಿ ಅಕ್ಷತ್ ಕಾರ್ ಪಾರ್ಕಿಂಗ್ ಮಾಡಿದ್ದ. ಅಧಿಕಾರಿಗಳ ಕಾರು ನಿಲ್ಲಿಸಲು ಸ್ಥಳವಿಲ್ಲದ ಕಾರಣ ಠಾಣೆಯ ಹೊರಗೆ ರಸ್ತೆ ಬದಿ ನಿಲ್ಲಿಸಿದ್ದರು. ಬೆಟಗೇರಿ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಏಕವಚನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪ ಕೂಡ ಅಕ್ಷತ್ ಹದ್ದಣ್ಣವರ್ ಮೇಲಿದೆ. ಇಷ್ಟೆಲ್ಲಾ ನಡೆದರೂ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡಿ ಕಳುಹಿಸಿದ್ದಾರೆ, ಜನಸಾಮಾನ್ಯರು ಹೀಗೆ ಮಾಡಿದ್ರೆ ಪೊಲೀಸರು ಸುಮ್ಮನೆ ಬಿಡ್ತಿದ್ರಾ, ಅಧಿಕಾರಿ ಸಹೋದರನಿಗೆ ಒಂದು ನ್ಯಾಯ, ಜನ ಸಾಮಾನ್ಯರಿಗೊಂದು ಕಾನೂನಾ, ಕರ್ತವ್ಯಕ್ಕೆ ಅಡ್ಡಿಪಡಿಸಿ ನಿಂದಿಸಿದ್ರೂ ಪೊಲೀಸರು ಸುಮ್ಮನಿರೋದು ಯಾಕೆ ಎಂದು ಐಪಿಎಸ್ ಅಧಿಕಾರಿ ಸಹೋದರನ ನಡೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.