ಮೈಸೂರು: ಮೈಸೂರಿನ ಬನ್ನಿಮಂಟಪದ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಗ್ಯಾರೇನ್ ನಂತಿರುವ ಶೆಡ್ ನ ಡ್ರಗ್ಸ್ ದಾಸ್ತಾನು ಘಟಕದ ಮೇಲೆ ಸ್ಥಳೀಯ ಪೊಲೀಸರ ನೆರವಿನಿಂದ ಮಹಾರಾಷ್ಟ್ರ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿ ಸುಮಾರು 61 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಹೊರ ರಾಜ್ಯದ ಮೂವರು ಹಾಗೂ ಸ್ಥಳೀಯ ವ್ಯಕ್ತಿಯೊಬ್ಬ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಂಧಿತ ಆರೋಪಿಯೊಬ್ಬರು ನೀಡಿದ ಸುಳಿವಿನ ಆಧಾರದ ಮೇಲೆ ಮಹಾರಾಷ್ಟ್ರ ಪೊಲೀಸರು ಸ್ಥಳೀಯ ಪೊಲೀಸರ ನೆರವಿನೊಂದಿಗೆ ದಾಳಿ ಮಾಡಿದಾಗ, ಪುಡಿ ರೂಪದ 11 ಕೆ.ಜಿ ಎಂಡಿಎಂಎ ಪುಡಿ ಹಾಗೂ ದ್ರವ ರೂಪದ 50 ಕೆ.ಜಿ ಎಂಡಿಎಂಎ ಮಾದಕ ವಸ್ತುಗಳು ಸಿಕ್ಕಿವೆ. ನಂತರ ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಲ್ವರ ಬಂಧನ : ಕಾರ್ಯಾಚರಣೆಯಲ್ಲಿ ನಾಲ್ವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಮುಂಬೈನ ಫಿರೋಜ್ ಮೌಲಾ ಶೇಕ್, ಗುಜರಾತಿನ ಶೇಕ್ ಆದಿಲ್, ಇನ್ನೊಬ್ಬ ಗುಜರಾತಿನ ಬೈರೋಚಿನ ಸೈಯದ್ ಮೆಹಫೂಜ್ ಹಾಗೂ ಮೈಸೂರಿನ ಅಜ್ಮಲ್ ಷರೀಫ್ ಎಂದು ಗುರುತಿಸಲಾಗಿದೆ. ಇದರ ಜೊತೆ ಮತ್ತೊಬ್ಬರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಶೆಡ್ ಬಗ್ಗೆ ಮಾಹಿತಿ : ನಗರದ ಬನ್ನಿಮಂಟಪದ ವರ್ತುಲ ರಸ್ತೆಯಲ್ಲಿದ್ದ ಶೆಡ್ ಜಾಗವು ನಗರದ ಕುಂಬಾರಕೊಪ್ಪಲು ವ್ಯಕ್ತಿಗೆ ಸೇರಿದೆ. ಈ ಜಾಗವನ್ನು ಮೈಸೂರಿನ ಬಂಧಿತ ಆರೋಪಿ ಅಜ್ಮಲ್ ಷರೀಫ್ ತಿಂಗಳಿಗೆ 20 ಸಾವಿರ ಬಾಡಿಗೆ ಹಾಗೂ 2 ಲಕ್ಷ ಅಡ್ವಾನ್ಸ್ ಕೊಟ್ಟು, ಕಾರು ರಿಪೇರಿ ಗ್ಯಾರೇಜ್ಗಾಗಿ ಬಾಡಿಗೆ ಪಡೆದಿದ್ದ. ಇದೇ ಸ್ಥಳದ ಅರ್ಧ ಭಾಗವನ್ನು ಈತ ಮುಂಬೈನ ರಿಯಾನ್ ಎಂಬ ವ್ಯಕ್ತಿಗೆ ತಿಂಗಳಿಗೆ 2 ಲಕ್ಷಕ್ಕೆ ಬಾಡಿಗೆಗೆ ನೀಡಿದ್ದ. ಇದೇ ಶೆಡ್ನ ಭಾಗದಲ್ಲಿ ಮಾದಕ ವಸ್ತುಗಳನ್ನು ದಾಸ್ತಾನು ಮಾಡಿ ಬೇರೆ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ನಗರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ: ಮಹಾರಾಷ್ಟ್ರ ಪೊಲೀಸರು ನಡೆಸಿದ ಕಾರ್ಯಾಚರಣೆಯಿಂದ ಎಚ್ಚೆತ್ತ ನಗರ ಪೊಲೀಸ್ ಆಯುಕ್ತರು ಭಾನುವಾರ ರಾತ್ರಿ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ್ದರು.
ಮಂಡಿ ಮೊಹಲ್ಲಾ, ಉದಯಗಿರಿ, ಎನ್. ಆರ್. ಮೊಹಲ್ಲಾ, ನಜರ್ ಬಾದ್, ಕೆ. ಆರ್. ಮೊಹಲ್ಲಾ ಸೇರಿದಂತೆ ಸುಮಾರು 59 ಕಡೆ ಪರಿಶೀಲನೆ ನಡೆಸಿದ್ದರು. ಮುಂದಿನ ದಿನಗಳಲ್ಲಿ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಪಾಸಣೆ ನಡೆಸಲು ಸೂಚಿಸಲಾಗಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ.