ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಜಪ್ತಿ ಮಾಡಿರುವ ವಿಚಾರಕ್ಕೆ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಡ್ರಗ್ಸ್ ದಂಧೆಕೋರರನ್ನು ಪತ್ತೆ ಹಚ್ಚಲು ಮಹಾರಾಷ್ಟ ಪೊಲೀಸರು ಬರಬೇಕಾದರೆ, ಕರ್ನಾಟಕದ ಪೊಲೀಸ್ ಇಲಾಖೆ ಏನು ಮಾಡುತ್ತಿದೆ? ರಾಜ್ಯ ಗೃಹ ಇಲಾಖೆ, ಸಿಎಂ ಮತ್ತು ಡಿಸಿಎಂ ಭೋಜನ ಕೂಟಕ್ಕೆ ಮಾತ್ರ ಸೀಮಿತವಾಗಿದಿಯೇ? ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸರ್ಕಾರ ಈ ಕೂಡಲೇ ಯುವ ಸಮುದಾಯಕ್ಕೆ ಮಾರಕವಾಗಿರುವ ಈ ಡ್ರಗ್ಸ್ ಮಾಫಿಯವನ್ನು ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ಡ್ರಗ್ಸ್ ನಿಗ್ರಹ ಕಾರ್ಯಪಡೆಯ ಕೊಂಕಣ ವಿಭಾಗದ ಪೊಲೀಸರು ಬೆಂಗಳೂರಿನ ಹಲವೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಆರ್‌ಜೆ ಇವೆಂಟ್ ಹೆಸರಿನಲ್ಲಿ ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದೆ.


