ಕಲಬುರಗಿಯ ಕಮಲಾಪುರ ತಾಲೂಕಿನ ಮಹಾಗಾಂವದಲ್ಲಿ ಟ್ರ್ಯಾಕ್ಟರ್ ಚಲಿಸುವಾಗ ರೀಲ್ಸ್ ಮಾಡುತ್ತಿದ್ದ ಚಾಲಕ ಅದೇ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ. ಮಹಾಗಾಂವ ಗ್ರಾಮದ ನಿವಾಸಿ ಲೋಕೇಶ ಕಲ್ಲಪ್ಪ ಪೂಜಾರಿ (22) ಮೃತ ಚಾಲಕ ಎಂದು ಗುರುತಿಸಲಾಗಿದೆ.
ಗ್ರಾಮದ ಕಬ್ಬಿನ ಗದ್ದೆಯಲ್ಲಿ ಟ್ರ್ಯಾಕ್ಟರ್ನಿಂದ ನೇಗಿಲು ಹೊಡೆಯುತ್ತಿರುವಾಗ ಒಂದು ಕೈಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ಮಾಡುತ್ತಿದ್ದ. ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದಿದ್ದ. ಆಯತಪ್ಪಿ ಕಾಲು ಜಾರಿ ಟ್ರ್ಯಾಕ್ಟರ್ ಚಕ್ರದ ಅಡಿಗೆ ಬಿದ್ದು ಟ್ರ್ಯಾಕ್ಟರ್ ದೇಹದ ಮೇಲೆ ಚಲಿಸಿದ್ದರಿಂದ ಅಲ್ಲೇ ಅಸು ನೀಗಿದ್ದಾನೆ.
ಈ ದುರಂತ ನಡೆದಾಗ ಹೊಲದಲ್ಲಿ ಯಾರೂ ಇರಲಿಲ್ಲ. ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿದ ಆತನ ದೇಹ ಅರ್ಧ ಭಾಗ ನಜ್ಜುಗುಜ್ಜಾಗಿತ್ತು. ದೂರದಿಂದ ಗಮನಿಸಿದ ರೈತರೊಬ್ಬರು ಹತ್ತಿರ ಹೋಗಿ ನೋಡಿದಾಗ ವಿಷಯ ಗೊತ್ತಾಗಿದೆ. ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಶಿವಶಂಕರ ಸಾಹು, ಪಿಎಸ್ಐ ಬಸವರಾಜ ಚಿತ್ತಕೋಟೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.


