Wednesday, December 03, 2025
Menu

ಸಂಕೀರ್ತನಾ ಯಾತ್ರೆಯಲ್ಲಿ ಹೈಡ್ರಾಮಾ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಗೆ ನುಗ್ಗಲು ಮಾಲಾಧಿಕಾರಿಗಳ ಯತ್ನ!

mandya news

ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ಸಂಕೀರ್ತನಾ ಯಾತ್ರೆಯ ವೇಳೆ ಮಾಲಾಧಾರಿಗಳು ಜಾಮೀಯ ಮಸೀದಿಗೆ ನುಗ್ಗಲು ಯತ್ನಿಸಿದ್ದರಿಂದ ಕೆಲವು ಗಂಟೆಗಳ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ಬುಧವಾರ ನಡೆಯಿತು.

ಹನುಮ ಧ್ವಜ  ಹಿಡಿದ ಸಾವಿರಾರು ಭಕ್ತರು ಗಂಜಾಂನ ಹಜರತ್ ಸೈಯದ್ ಜವಾರ್ ದರ್ಗಾದ ಮುಂದೆ ಹನುಮ ಮಾಲಾಧಾರಿಗಳ ಯಾತ್ರೆ ಸಾಗಿಬಂದು ಜಾಮೀಯಾ ಮಸೀದಿ ತಲುಪಿತ್ತು.

ಕಳೆದ ವರ್ಷ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಜಾಮೀಯ ಮಸೀದಿ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ಮಾಲಾಧಾರಿಗಳು ಏಕಾಏಕಿ ಜಾಮೀಯಾ ಮಸೀದಿ ಒಳಗೆ ನುಗ್ಗಲು ಯತ್ನಿಸಿದರು.

ಜಾಮೀಯಾ ಮಸೀದಿ ನಮ್ಮದು. ಇಲ್ಲಿ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದು ಘೋಷಣೆ ಕೂಗುತ್ತಾ ಮಾಲಾಧಾರಿಗಳು ಮಸೀದಿ ಒಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮಾಲಾಧಾರಿಗಳನ್ನು ತಡೆದು ನಿಲ್ಲಿಸಿದಾಗ ಕೆಲವು ಸಮಯ ಮಾತಿನ ಚಕಮಕಿ ನಡೆಯಿತು.

ʻಸಂಕೀರ್ತನಾ ಯಾತ್ರೆ ಜಾಮೀಯಾ ಮಸೀದಿ ತಲುಪಿದಂತೆ ಮಸೀದಿ ಬಳಿ ಜೈ ಶ್ರೀರಾಮ್, ಜೈ ಹನುಮಾನ್, ನಾವೆಲ್ಲಾ ಒಂದು ನಾವೇಲ್ಲಾ ಹಿಂದೂ.. ಹನುಮನ ಪಾದದ ಮೇಲಾಣೆ ಮಂದಿರವಿಲ್ಲೇ ಕಟ್ಟುವೆವುʼ ಎಂದು ಘೋಷಣೆ ಕೇಳಿಬಂದಿದೆ. ಮಸೀದಿ ಬಳಿಯ ವೃತ್ತದಲ್ಲಿ ನಿಂಬೆ ಹಣ್ಣು ಇಟ್ಟು ಕರ್ಪೂರ ಹಚ್ಚಿದ ಮಾಲಧಾರಿಗಳು… ಆ ಜಾಗ ನಮ್ಮದು ಎಂದು ಘೋಷಣೆʼ ಕೂಗಿದ್ದಾರೆ.

ಜಾಮೀಯಾ ಮಸೀದಿ ಬಳಿ ಭಾರೀ ಸಂಖ್ಯೆಯ ಹನುಮ ಮಾಲಾಧಾರಿಗಳು ಸೇರುತ್ತಿದ್ದಂತೆ ಜಾಮೀಯಾ ಮಸೀದಿ ಸುತ್ತ ಭಾರೀ ಪೊಲೀಸ್ ಸರ್ಪಗಾವಲು ಹಾಕಿದ್ದಾರೆ. ಮಾಲಾಧಾರಿಗಳ ನಡುವೆ ತಳ್ಳಾಟ ನೂಕಾಟ ಉಂಟಾದ ಬೆನ್ನಲ್ಲೇ ಮಾಲಧಾರಿಗಳನ್ನ ಮನವೊಲಿಸಿ ಪೊಲೀಸರು ಕಳುಹಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಧಾರಿಗಳ ಸಂಕೀರ್ತನಾ ಯಾತ್ರೆಯಲ್ಲಿ ʻಜೈ ಶ್ರೀರಾಮ್, ಜೈ ಹನುಮಾನ್ʼ ಘೋಷಣೆ ಮೊಳಗಿದೆ. ಡಿಜೆ ಹಾಗೂ ತಮಟೆ ಸದ್ದಿಗೆ ಬಾವುಟ ಹಿಡಿದು ಮಾಲಧಾರಿಗಳು ಕುಣಿದು ಕುಪ್ಪಳಿಸಿದ್ದಾರೆ. ಮೂಡಲ ಬಾಗಿಲು ಆಂಜನೇಯಸ್ವಾಮಿ ಪುನರ್ ಪ್ರತಿಷ್ಠಾಪನೆ, ಜಾಮಿಯಾ ಮಸೀದಿ ಜಾಗದಲ್ಲಿ ಮತ್ತೆ ಹನುಮ ಮಂದಿರ ನಿರ್ಮಾಣದ ಸಂಕಲ್ಪ ಮಾಡಿ ಸಾವಿರಾರು ಹನುಮ ಭಕ್ತರು, ಹಿಂದೂ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಸುಮಾರು 4 ಕಿಮೀ ದೂರ ಹನುಮ ಮೂರ್ತಿ ಜೊತೆ ಮೆರವಣಿಗೆ ನಡೆದಿದೆ.

ಶ್ರೀರಂಗಪಟ್ಟಣ ಟೌನ್, ಗಂಜಾಂ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. 1,500ಕ್ಕೂ ಹೆಚ್ಚು ಪೊಲೀಸರು, ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ದಕ್ಷಿಣ ವಲಯ ಐಜಿಪಿ ನೇತೃತ್ವದಲ್ಲಿ ಮೂವರು ಎಸ್ಪಿ, ಮೂವರು ಎಎಸ್ಪಿ ಸೇರಿ 1,100 ಅಧಿಕಾರಿಗಳು, ಸಿಬ್ಬಂದಿ, 300ಕ್ಕೂ ಹೆಚ್ಚು ಹೋಂ ಗಾರ್ಡ್ಸ್‌ಗಳ ನಿಯೋಜನೆ ಮಾಡಲಾಗಿತ್ತು. ಯಾತ್ರೆ ಸಾಗುವ ಮಾರ್ಗದಲ್ಲಿ 110 ಸಿಸಿಟಿವಿ ಅಳವಡಿಸಲಾಗಿದೆ. ಮೆರವಣಿಗೆ ಮೇಲೆ ಹೆಚ್ಚುವರಿಯಾಗಿ 20 ವಿಡಿಯೋ ಕ್ಯಾಮೆರಾ, 4 ಡ್ರೋಣ್ ಕ್ಯಾಮೆರಾಗಳ ಕಣ್ಗಾವಲು ಇಡಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

ಭಾರೀ ವಿವಾದಕ್ಕೆ ಕಾರಣವಾಗಿದ್ದ ಹನುಮ ಮಾಲಧಾರಿಗಳ ಸಂಕೀರ್ತನಾ ಯಾತ್ರೆ ರಂಗನಾಥಸ್ವಾಮಿ ದೇಗುಲದ ಮೈದಾನದಲ್ಲಿ ಮುಕ್ತಾಯಗೊಂಡಿದೆ. ಇದೀಗ ಪೇಟೆ ಬೀದಿ ಮೂಲಕ ತೆರಳಿ ಯಾತ್ರೆ ಮುಕ್ತಾಯಗೊಂಡಿದೆ. ಯಾತ್ರೆ ಸಲುವಾಗಿ ಶ್ರೀರಂಗಪಟ್ಟಣ ಸಂಪೂರ್ಣ ಕೇಸರಿಮಯವಾಗಿದೆ.

Related Posts

Leave a Reply

Your email address will not be published. Required fields are marked *