ಗೋವಾದಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಮೆರಿಕದ ಯುವತಿಯೊಬ್ಬರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಖಾನಾಪುರದ ಮಾಜಿ ಶಾಸಕಿ ಹಾಗೂ ಗೋವಾದ ಎಐಸಿಸಿ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್ ವೈದ್ಯಕೀಯ ನೆರವು ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಡಾ.ಅಂಜಲಿ ನಿಂಬಾಳ್ಕರ್ ಅವರ ಮಾನವೀಯ ಸೇವೆಯನ್ನು ವಿಮಾನದ ಪೈಲಟ್, ವಿಮಾನ ಸಿಬ್ಬಂದಿ ಹಾಗೂ ಸಹಪ್ರಯಾಣಿಕರು ಶ್ಲಾಘಿಸಿದರು. ನಿಂಬಾಳ್ಕರ್ ಅವರು ಸಮಯೋಚಿತವಾಗಿ ಚಿಕಿತ್ಸೆ ನೀಡಿ ಯುವತಿಯ ಪ್ರಾಣ ಉಳಿಸಿರುವುದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಮೆರಿಕದ ಯುವತಿಗೆ ತೀವ್ರ ತರ ನಡುಕ ಶುರುವಾಗಿ ಪ್ರಜ್ಞಾಹೀನಳಾಗಿ ಕುಸಿದುಬಿದ್ದಿದ್ದಾಳೆ. ನಾಡಿ ಕೂಡ ಸಿಗದ ಸ್ಥಿತಿಯಲ್ಲಿ ವೈದ್ಯೆಯಾಗಿರುವ ಅಂಜಲಿ ನಿಂಬಾಳ್ಕರ್ ಅವರು ಕೂಡಲೇ ಕಾರ್ಡಿಯೋ–ಪಲ್ಮನರಿ ರಿಸಸ್ಸಿಟೇಷನ್ ನೀಡಿದರು. ಸಮಯೋಚಿತ ಚಿಕಿತ್ಸೆಯಿಂದ ಆ ಯುವತಿಗೆ ಮತ್ತೆ ನಾಡಿ ಬಡಿತ ಶುರುವಾಗಿದೆ.ಅರ್ಧ ಗಂಟೆ ನಂತರ ಆಕೆ ಮತ್ತೊಮ್ಮೆ ಕುಸಿದುಬಿದ್ದಳು. ವಿಮಾನದಲ್ಲಿದ್ದವರಲ್ಲಿ ಆತಂಕ ಆವರಿಸಿದರೂ ಡಾ.ಅಂಜಲಿ ಧೈರ್ಯವಾಗಿ ಆಕೆಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ಇಡೀ ಪ್ರಯಾಣದ ಅವಧಿಯಲ್ಲಿ ಡಾ.ಅಂಜಲಿ ನಿಂಬಾಳ್ಕರ್ ಆ ಯುವತಿಯ ಪಕ್ಕದಲ್ಲೇ ನಿಂತು ನಿರಂತರವಾಗಿ ನೋಡಿಕೊಂಡರು. ವಿಮಾನ ದೆಹಲಿಯಲ್ಲಿ ಇಳಿಯುವ ಮುನ್ನವೇ ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿ, ವಿಮಾನ ಲ್ಯಾಂಡ್ ಆದ ಕೂಡಲೇ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿಸಿದರು.


