Menu

ವರದಕ್ಷಿಣೆ ಕಿರುಕುಳ ಆರೋಪ: ಚಿಕ್ಕಮಗಳೂರಿನಲ್ಲಿ ವಿಷ ಸೇವಿಸಿದ್ದ ಮಹಿಳೆ ಸಾವು

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪೂಜಾ ಎಂದು (30) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿಯ ಕೋಣಂದೂರು ಸಮೀಪದ ಶಂಕರಳ್ಳಿ ಈಶ್ವರಪ್ಪನವರ ಮಗಳು ಪೂಜಾ ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರು ಎನ್ ಆರ್ ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ನಿವಾಸಿ ಶರತ್ ಜೊತೆ ಮದುವೆ ಮಾಡಿಕೊಂಡಿದ್ದರು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ವಿಷ ಕೊಟ್ಟು ಕೊಲೆಗೆ ಯತ್ನಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪೂಜಾ ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ.
ಪೂಜಾ ದಂಪತಿಗೆ ಎರಡು ವರ್ಷದ ಗಂಡು ಮಗುವಿದೆ. ಶರತ್ ತಂದೆ, ತಾಯಿ ಹಾಗೂ ಸಹೋದರಿ ಶಬರಿ ಪೂಜಾಳಿಗೆ ವರದಕ್ಷಿಣೆ ಕಿರುಕುಳ ನೀಡಿದ್ದರು ಎಂಬ ಆರೋಪವೂ ಇದೆ.

ವದಕ್ಷಿಣೆ ವಿಚಾರವಾಗಿ ಪೂಜಾ ಮೇಲೆ ಹಲ್ಲೆ ನಡೆದಿತ್ತು. ಗಂಡನ ಕಿರುಕುಳದ ಬಗ್ಗೆ ಪೂಜಾ ತವರಿನಲ್ಲಿ ಹೇಳಿಕೊಂಡಿದ್ದಳು, ತವರು ಮನೆಯವರು ಸಮಾಧಾನ ಮಾಡಿದ್ದರು. ಎರಡು ದಿನಗಳ ಹಿಂದೆ ಕಳೆನಾಶಕ ಕೊಟ್ಟು ಕೊಲೆಗೆ ಯತ್ನಿಸಿ ಆತ್ಮಹತ್ಯೆ ಎಂದು ಶರತ್‌ ಕುಟುಂಬ ಬಿಂಬಿಸಲು ಯತ್ನಿಸಿರುವುದಾಗಿ ಪೂಜಾ ಮನೆಯವರು ದೂರಿದ್ದಾರೆ.

ಶರತ್ ಹಾಗೂ ಆತನ ತಂದೆ ಸುಧಾಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶರತ್‌ ತಾಯಿ ರಾಧಾ ಮತ್ತು ಅಕ್ಕ ಶಬರಿ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರಿನ ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *