ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಚಿತ್ರ ನಿರ್ದೇಶಕ ಎಸ್. ನಾರಾಯಣ್ ಮತ್ತು ಅವರ ಮಗ ಪವನ್ ವಿರುದ್ಧ ಸೊಸೆ ಪವಿತ್ರಾ ದೂರು ದಾಖಲಿಸಿದ್ದಾರೆ. ಮದುವೆಯಲ್ಲಿ ವರದಕ್ಷಿಣೆ ಕೊಟ್ಟಿದ್ದರೂ ಹೆಚ್ಚಿನ ಹಣಕ್ಕೆ ಒತ್ತಾಯಿಸುತ್ತಿರುವದಾಗಿ ಪವಿತ್ರಾ ಅವರು ಮಾವ ಮತ್ತು ಗಂಡನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.
2021ರಲ್ಲಿ ಎಸ್. ನಾರಾಯಣ್ ಪುತ್ರ ಪವನ್ ಮತ್ತು ಪವಿತ್ರಾ ಅವರ ಮದುವೆ ನಡೆದಿತ್ತು. ಮದುವೆಯಲ್ಲಿ 1 ಲಕ್ಷ ರೂ. ಮೌಲ್ಯದ ಉಂಗುರ ನೀಡಿದ್ದು, ಪವಿತ್ರಾ ಕುಟುಂಬ ಮದುವೆ ಖರ್ಚು ಮಾಡಿತ್ತು ಎನ್ನಲಾಗಿದೆ. ಆ ಸಮಯದಲ್ಲಿ ಕೆಲಸ ಇಲ್ಲದೆ ಪವನ್ ಮನೆಯಲ್ಲೇ ಇದ್ದ. ತಾನೇ ಕೆಲಸ ಮಾಡಿ ಪವನ್ ಪತ್ನಿ ಪವಿತ್ರಾ ಮನೆ ನೋಡಿಕೊಳ್ಳುತ್ತಿದ್ದರು.
ಕಲಾ ಸಾಮ್ರಾಟ್ ಟೀಂ ಅಕಾಡಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಲು ಪವನ್ ಪವಿತ್ರಾ ಬಳಿ ಹಣ ಕೇಳಿದ್ದು, ಪವಿತ್ರಾ ತಮ್ಮ ತಾಯಿಯ ಒಡವೆಯನ್ನು ಪವನ್‌ಗೆ ಕೊಟ್ಟಿದ್ದರು. ನಷ್ಟ ಆಗಿ ಕಲಾ ಸಾಮ್ರಾಟ್ ಟೀಂ ಅಕಾಡಮಿ ಮುಚ್ಚಲಾಗಿತ್ತು.
ನಂತರ 10 ಲಕ್ಷ ರೂಪಾಯಿ ಸಾಲ ಮಾಡಿ ಪಲ್ಲವಿ ಪತಿಗೆ ನೀಡಿದ್ದರು. ಎಸ್.ನಾರಾಯಣ್, ಪತ್ನಿ, ಪುತ್ರ ಹಲ್ಲೆ ನಡೆಸಿ ಹಣಕ್ಕೆ ಒತ್ತಾಯಿಸಿ ಜಗಳವಾಡಿ ಪವಿತ್ರಾ ಅವರನ್ನು ಮನೆಯಿಂದ ಹೊರಹಾಕಿದ್ದರು. ಹೀಗೆಂದು ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ, ಪತಿ ಪವನ್ ವಿರುದ್ಧ ಪವಿತ್ರಾ ದೂರು ದಾಖಲಿಸಿದ್ದಾರೆ. ನನಗೆ, ನನ್ನ ಮಗನಿಗೆ ತೊಂದರೆಯಾದರೆ ಇವರುಗಳೇ ಕಾರಣ ಎಂದೂ ಪವಿತ್ರಾ ಎಫ್ಐಆರ್ನಲ್ಲಿ ಉಲ್ಲೇಖ ಮಾಡಿದ್ದಾರೆ.