ಬೆಂಗಳೂರು: ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ `ಮನೆ ಮನೆಗೆ ಪೊಲೀಸ್’ಎಂಬ ವಿನೂತನ ಕಾರ್ಯಕ್ರಮ ಇಂದಿನಿಂದ ಆರಂಭಗೊಳ್ಳಲಿದೆ.
`ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮವನ್ನು ಬೆಳಗ್ಗೆ 10.30 ಕ್ಕೆ ಗೋವಿಂದರಾಜನಗರ ವಾರ್ಡ್‌ನ ಎಂ.ಸಿ ಲೇಔಟ್‌ನಲ್ಲಿ ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ಉದ್ಘಾಟನೆ ಮಾಡಲಿದ್ದಾರೆ. ಡಿಜಿ-ಐಜಿಪಿ, ಡಾ.ಎಂ.ಎ ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
`ಮನೆ ಮನೆಗೆ ಪೊಲೀಸ್’ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮುಕ್ತವಾಗಿ ಮಹಿಳೆಯರ ಸಮಸ್ಯೆಯನ್ನು ಬೀಟ್‌ಗಳಲ್ಲಿಯೇ ಆಲಿಸಲಿದ್ದಾರೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಿ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದು, ಕೌಟುಂಬಿಕ ದೌರ್ಜನ್ಯ ವಿರುದ್ಧ ಜಾಗೃತಿ ಮತ್ತು ಕಾನೂನಿನ ಅರಿವು ಮೂಡಿಸಲಿದ್ದಾರೆ.
ಪೊಲೀಸ್ ಸೇವೆಗಳ ಪ್ರತಿಯೊಂದು ಸ್ತರದಲ್ಲೂ ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವ ಸಾಧಿಸಿಕೊಳ್ಳುವುದರಿಂದ ಮಾತ್ರವೇ ಉತ್ಕೃಷ್ಟ ಸೇವೆಯನ್ನು ಒದಗಿಸಲು ಸಾಧ್ಯ. ಈ ನಿಟ್ಟಿನಲ್ಲಿ ಈಗಾಗಲೇ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಬ್-ಬೀಟ್‌ಗಳನ್ನಾಗಿ ವಿಂಗಡಿಸಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.
ಇನ್ನು ಮುಂದೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರ ದೂರುಗಳನ್ನು ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಿದ್ದಾರೆ.