Menu

ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮನ್ನು ಪ್ರಚೋದನೆ ಮಾಡಬೇಡಿ: ಯತೀಂದ್ರಗೆ ಇಕ್ಬಾಲ್ ಹುಸೇನ್ ವಾರ್ನ್‌

ನಾಯಕತ್ವ ಬದಲಾವಣೆ ವಿಚಾರವಾಗಿ ತಂದೆಯ ಪರವಾಗಿ ಪದೇ ಪದೇ ಬ್ಯಾಟಿಂಗ್ ಬೇಡ. ನಮ್ಮನ್ನು ಪ್ರಚೋದನೆ ಮಾಡಬೇಡಿ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಿಸ್ತಿನ ಪಕ್ಷ. ತಂದೆ ಪರವಾಗಿ ಪದೇ ಪದೆ ಹೀಗೆ ಅಸಹ್ಯವಾಗಿ ನಡೆದುಕೊಳ್ಳುವುದು ಸರಿಯಲ್ಲ. ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ಪದೇ ಪದೆ ಮಾತನಾಡುತ್ತ ನಮ್ಮನ್ನು ಪ್ರಚೋದಿಸಬೇಡಿ. ದೇವರಾಜು ಅರಸು ಬಳಿಕ ದಲಿತರ ಪರವಾಗಿ ಶೋಷಿತರ ಪರವಾಗಿ ಸಿದ್ದರಾಮಯ್ಯ ಅಳಿಲು ಸೇವೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಡಿಕೆಶಿವಕುಮಾರ್ ಅವರಿಗೂ ಅವಕಾಶ ಮಾಡಿಕೊಡಬೇಕು. ಈ ಅವಧಿಯಲ್ಲೇ ಡಿಕೆ ಶಿವಕುಮಾರ್ ಮುಖ್ಯ ಮಂತ್ರಿ ಆಗಬೇಕು ಎಂದು ಇಕ್ಬಾಲ್ ಹುಸೇನ್ ಆಗ್ರಹಿಸಿದರು.

ಪರಿಷತ್ ಸದಸ್ಯ ಯತೀಂದ್ರಗೆ ನೋಟಿಸ್ ನೀಡದಿರುವ ವಿಚಾರವಾಗಿ ಮಾತನಾಡಿ, ನಾನು ಶಾಸಕ, ಯತೀಂದ್ರ ವಿಧಾನ ಪರಿಷತ್ ಸದದ್ಯ. ನಾಯಕತ್ವ ವಿಚಾರವಾಗಿ ನಾನು ಈ ಹಿಂದೆ ಮಾತನಾಡಿದಾಗ ನನಗೆ ನೋಟಿಸ್ ನೀಡಲಾಗಿತ್ತು. ಯಾರು ನೋಟಿಸ್ ನೀಡುವ ಜವಾಬ್ದಾರಿ ಹೊಂದಿದ್ದಾರೋ, ಅವರು ಇದನ್ನೆಲ್ಲಾ ಗಮನಿಸಬೇಕು ಎಂದರು. ಯತೀಂದ್ರ ನಾಯಕತ್ವ ಬದಲಾವಣೆಯ ಬಗ್ಗೆ ಹೇಳಿಕೆ ಕೊಟ್ಟರೂ ಏಕೆ ಅವರಿಗೆ ನೋಟಿಸ್ ಕೊಡಲಿಲ್ಲ ಎಂದು ಪ್ರಶ್ನಿಸಲು ಆಗುವುದಿಲ್ಲ. ಹತ್ತು ನೋಟಿಸ್ ನೀಡಿದರೂ ನಾನು ಒಂದೇ ಉತ್ತರ ನೀಡೋದು. ಡಿಕೆ ಶಿವಕುಮಾರ್ ಒಂದು ಬಾರಿ ಸಿಎಂ ಆಗಬೇಕು ಅನ್ನೋದಷ್ಟೆ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಎರಡೂವರೆ ವರ್ಷ ಆದ ಮೇಲೆ ಸಾಕಷ್ಟು ಶಾಸಕರು ಒಬ್ಬ ನಿಷ್ಠಾವಂತ ಪಕ್ಷ ನಿಷ್ಠ ವ್ಯಕ್ತಿ ಸಿಎಂ ಆಗಬೇಕು ಎಂದು ಡಿಕೆ ಶಿವಕುಮಾರ್ ಪರವಾಗಿ ಮಾತನಾಡಿದ್ದೇವೆ. ಅವರ ಹೋರಾಟ ಶ್ರಮಕ್ಕೆ ಬೆಲೆ ಸಿಗಬೇಕು ಎಂದು ಹೋರಾಟ ಮಾಡುತ್ತಿದ್ದೇವೆ ಎಂದು ಡಿಕೆಶಿ ಪರವಾಗಿ ಇಕ್ಬಾಲ್ ಹುಸೇನ್ ಬ್ಯಾಟಿಂಗ್ ಮಾಡಿದರು.

ನಾಯಕತ್ವ ಬದಲಾವಣೆ ಮುಗಿದು ಹೋದ ಅಧ್ಯಾಯ. ನಾಯಕತ್ವ ಬದಲಾವಣೆ ಮಾಡಲು ಕೆಲವು ನಾಯಕರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿಯೇ ಮುಂದುವರಿಯಲಿದ್ದಾರೆ ಎಂದು ಯತೀಂದ್ರ ಹೇಳಿರುವುದು ಕಾಂಗ್ರೆಸ್ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಯತೀಂದ್ರ ಅವರೇ ನಮ್ಮ ಹೈ ಕಮಾಂಡ್. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡುತ್ತೇನೆ. ಅವರೇ ಹೈಕಮಾಂಡ್ ಎಂಬಂತೆ ಹೇಳಿಕೆ ನೀಡಿರುವಾಗ ಅವರನ್ನೇ ಹೈಕಮಾಂಡ್ ಎಂದು ಸ್ವೀಕಾರ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕುಟುಕಿದ್ದಾರೆ.

Related Posts

Leave a Reply

Your email address will not be published. Required fields are marked *