ವೆನಿಜುವೆಲಾದ ಮೇಲೆ ಅಮೆರಿಕ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷರನ್ನು ಬಂಧಿಸಿದ ಬಳಿಕ ಉಂಟಾಗಿರುವ ಬಿಕ್ಕಟ್ಟು ಪರಿಗಣಿಸಿ ಅಲ್ಲಿಗೆ ಅನಗತ್ಯ ಪ್ರಯಾಣ ಮಾಡಬೇಡಿ ಎಂದು ಕೇಂದ್ರ ಸರ್ಕಾರವು ಭಾರತೀಯರಿಗೆ ಎಚ್ಚರಿಕೆ ನೀಡಿದೆ.
ವೆನೆಜುವೆಲಾದಲ್ಲಿರುವ ಎಲ್ಲಾ ಭಾರತೀಯರು ಜಾಗರೂಕರಾಗಿ ಇರಬೇಕು, ಅನಗತ್ಯವಾಗಿ ಹೊರಗಡೆ ಓಡಾಡಬೇಡಿ.ಕ್ಯಾರಕಾಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.
ರಾಜಧಾನಿ ಕ್ಯಾರಕಾಸ್ ಮೇಲೆ ದಾಳಿ ನಡೆಸಿ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಸೆರೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈ ಬೆಳವಣಿಗೆ ದಕ್ಷಿಣ ಅಮೆರಿಕಾದ ದೇಶದಲ್ಲಿ ರಾಜಕೀಯ ಅನಿಶ್ಚಿತತೆ ಹುಟ್ಟುಹಾಕಿದೆ. ವೆನೆಜುವೆಲಾ ಮೇಲೆ ಅಮೆರಿಕ ದಾಳಿ ನಡೆಸಿ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯನ್ನು ಸೆರೆಹಿಡಿದ ಕ್ರಮವನ್ನು ರಷ್ಯಾ ಮತ್ತು ಚೀನಾ ಸೇರಿದಂತೆ ಅನೇಕ ಪ್ರಮುಖ ರಾಷ್ಟ್ರಗಳು ಖಂಡಿಸಿವೆ.
ಭಾರತೀಯರು ರಾಯಭಾರ ಕಚೇರಿಯನ್ನು 58-412-9584288 ದೂರವಾಣಿ ಸಂಖ್ಯೆ ಹಾಗೂ ಇಮೇಲ್ ಮೂಲಕ ಸಂಪರ್ಕಿಸಬಹುದು. ವೆನೆಜುವೆಲಾದಲ್ಲಿ 50 ಅನಿವಾಸಿ ಭಾರತೀಯರು ಮತ್ತು 30 ಭಾರತೀಯ ಮೂಲದ ವ್ಯಕ್ತಿಗಳು ವಾಸವಿದ್ದಾರೆ.
ವೆನಿಜುವೆಲಾ ವಿರುಧ ಅಮೆರಿಕ ಶನಿವಾರ ಡ್ರಗ್ಸ್ ಭಯೋತ್ಪಾದನೆ ಆರೋಪ ಹೊರಿಸಿ ದಾಳಿ ನಡೆಸಿದೆ. ವಿಮಾನ, ಕಾಪ್ಟರ್ ಹಾಗೂ ಭೂಸೇನೆಯನ್ನು ಬಳಸಿ ರಾಜಧಾನಿ ಕಾರಕಸ್ ಮೇಲೆ ದಾಳಿ ನಡೆಸಿರುವ ಅಮೆರಿಕ ಸೇನೆ, ಅಧ್ಯಕ್ಷ ನಿಕೋಲಸ್ ಮಡುರೋ ಹಾಗೂ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಪಹರಿಸಿ ಹಡಗು ಮೂಲಕ ಅಮೆರಿಕಕ್ಕೆ ಕರೆದೊಯ್ದಿದೆ.
ಏಳು ಬಾಂಬ್ ನಡೆಸಿದ ಅಮೆರಿಕ ಇಡೀ ದೇಶವನ್ನೇ ತೆಕ್ಕೆಗೆ ಪಡೆದುಕೊಂಡಿದೆ. ವೆನಿಜುವೆಲಾದಲ್ಲಿ ಅಧಿಕಾರ ಹಸ್ತಾಂತರವಾಗಿ ಪರ್ಯಾಯ ಸರ್ಕಾರ ರಚನೆ ಆಗುವವರೆಗೆ ಅಮೆರಿಕವೇ ಆಡಳಿತ ನೋಡಿಕೊಳ್ಳಲಿದೆ. ಅಮೆರಿಕ ತೈಲ ಕಂಪನಿಗಳು ಅಲ್ಲಿ ವ್ಯಾಪಾರ ನಡೆಸಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.


