ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣ ಸಂಬಂಧ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಅಮಾನತು ಮಾಡಿದ್ದ ಆದೇಶವನ್ನು ರದ್ದು ಮಾಡಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ)ಯ ಆದೇಶ ಪ್ರಶ್ನಿಸಿ,ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿಯವರೆಗೂ ಐಜಿಪಿ ವಿಕಾಸ್ ಕುಮಾರ್ ಅವರು ಕರ್ತವ್ಯಕ್ಕೆ ಮರು ನೇಮಕಕ್ಕೆ ಒತ್ತಾಯಿಸಬಾರದು ಎಂದು ಹೈಕೋರ್ಟ್ ಮೌಖಿಕವಾಗಿ ಸೂಚನೆ ನೀಡಿದೆ.
ವಿಕಾಸ್ ಕುಮಾರ್ ಅವರ ಅಮಾನತು ಆದೇಶ ರದ್ದುಪಡಿಸಿದ್ದ ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ಟಿ.ಎಂ.ನದಾಫ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಘಟನೆ ಸಂಬಂಧ ಅಧಿಕಾರಿಗಳನ್ನು ಬೇರೊಂದು ಕಡೆ ವರ್ಗಾವಣೆ ಮಾಡಬಹುದಿತ್ತೇ?. ಇಲ್ಲವೇ ಅಮಾನತು ಮಾಡಿರುವ ಕ್ರಮ ಸಮರ್ಪಕವಾಗಿದಿಯೇ ಎಂಬುದನ್ನು ರಾಜ್ಯ ಸರ್ಕಾರ ವಿವರವಾಗಿ ತಿಳಿಸಬೇಕು. ಅಧಿಕಾರಿಗಳ ಅಮಾನತು ಮಾಡಿರುವ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುವುದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು ಎಂದು ಪೀಠ ಹೇಳಿದೆ.
ಈ ವೇಳೆ ಹಾಜರಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅಧಿಕಾರಿಗಳನ್ನು ಅಮಾನತು ಮಾಡಿರುವ ಸರ್ಕಾರದ ಕ್ರಮ ಸರಿಯಾಗಿದೆ. ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಕರ್ತವ್ಯಲೋಪಕ್ಕೆ ಕುರಿತ ದಾಖಲೆಗಳನ್ನು ಒದಗಿಸಲಾಗುವುದು. ಅರ್ಜಿ ವಿಚಾರಣೆ ಪೂರ್ಣಗೊಳ್ಳುವವರೆಗೂ ಸಿಎಟಿ ಆದೇಶಕ್ಕೆ ತಡೆ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ವಿಕಾಸ್ ಕುಮಾರ್ ಪರ ವಕೀಲರು, ಸಿಎಟಿ ಆದೇಶದ ಅನ್ವಯ ಅಧಿಕಾರಿಗಳನ್ನು ಮರು ನೇಮಕ ಮಾಡದಿದ್ದಲ್ಲಿ ತಕ್ಷಣ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಪೀಠಕ್ಕೆ ವಿವರಿಸಿದರು. ಇದಕ್ಕೆ ನ್ಯಾಯಪೀಠ, ಅಧಿಕಾರಿಗಳ ಅಮಾನತು ಆದೇಶ ರದ್ದಾಗಿದೆ. ಪುನರ್ ನೇಮಕದ ಆದೇಶ ಹೊರಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಯ ಅಂತಿಮ ಆದೇಶದವರೆಗೂ ಕರ್ತವ್ಯಕ್ಕೆ ಹಾಜರಾಗುವುದನ್ನು ಮುಂದೂಡಿ ಎಂದು ಮೌಖಿಕವಾಗಿ ಹೇಳಿತು. ಅದಕ್ಕೆ ಪ್ರತಿವಾದಿ ವಿಕಾಸ್ ಕುಮಾರ್ ಪರ ವಕೀಲರು, ಪ್ರಕರಣ ಸಂಬಂಧ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಜುಲೈ 9ಕ್ಕೆ ಮುಂದೂಡಿತು. ಜೂನ್ 3 ರಂದು ಐಪಿಎಲ್ ಅಂತಿಮ ಪಂದ್ಯದಲ್ಲಿ ಆರ್ಸಿಬಿ ಜಯಗಳಿಸಿತ್ತು. ಜೂನ್ 4ರಂದು ರಾಜ್ಯ ಸರ್ಕಾರ ವಿಧಾನಸೌಧದ ಮುಂದೆ ತಂಡದ ಆಟಗಾರರನ್ನು ಸನ್ಮಾನಿಸಿತ್ತು. ಈ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ನಡೆದಿದ್ದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಮೃತರಾಗಿದ್ದರು.
ಘಟನೆಗೆ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪವೇ ಕಾರಣ ಎಂದು ತಿಳಿಸಿದ್ದ ಸರ್ಕಾರ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ್, ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶೇಖರ್ ಹೆಚ್.ಟೆಕ್ಕಣ್ಣನವರ್, ಕಬ್ಬನ್ಪಾರ್ಕ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಿ.ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎ.ಕೆ.ಗರೀಶ್ ಕುಮಾರ್ ಅವರನ್ನು ಅಮಾನತು ಮಾಡಿತ್ತು,ಇದನ್ನು ಪ್ರಶ್ನಿಸಿ ವಿಕಾಸ್ ಕುಮಾರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.