ಬೆಂಗಳೂರು: ದೇವರಾಜ ಅರಸು ಅವರ ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತಕ್ಕೂ ಹೋಲಿಕೆ ಮಾಡುವುದು ಬೇಡ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಗೆ ಬುಧವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ದೇವರಾಜ ಅರಸು ಜೊತೆ ಸಿದ್ದರಾಮಯ್ಯ ಹೋಲಿಕೆ ಸರಿಯಲ್ಲ.ದೇವರಾಜ ಅರಸು ಆಡಳಿತ ವೈಖರಿ ಬೇರೆ, ಸಿದ್ದರಾಮಯ್ಯ ಆಡಳಿತ ವೈಖರಿ ಬೇರೆ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಈ ಸಮಯದಲ್ಲಿ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ತೋರಿಸಿದ್ದನ್ನು ಜನರು ಮೆಚ್ಚುವುದಿಲ್ಲ ಎಂದರು.
ಸಿಎಂ ಕುರ್ಚಿಗಾಗಿ ಆಂತರಿಕ ಕಚ್ಚಾಟ ಕಾಂಗ್ರೆಸ್ ನಲ್ಲಿ ಮುಂದುವರಿಯುತ್ತಲೇ ಇದೆ, ಸರ್ಕಾರದಲ್ಲಿ ಆಡಳಿತ ವೈಖರಿ ಸರಿಯಾಗಿಲ್ಲ, ಸಿದ್ದರಾಮಯ್ಯನವರದ್ದು ಸಾಧನೆ, ದಾಖಲೆ ಎಂದು ಹೇಳಲು ಏನೂ ಇಲ್ಲ ಎಂದರು.
ಬಿಜೆಪಿ ಗೆಲ್ಲುತ್ತದೆ ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ನಿಶ್ಚಿತವಾಗಿ ದೊಡ್ಡ ಬಹುಮತದೊಂದಿಗೆ ಗೆಲ್ಲುತ್ತದೆ. ರಾಜ್ಯದ ಜನತೆ ಈಗ ಬಿಜೆಪಿ ಪರವಾಗಿದ್ದಾರೆ. ಕಾರ್ಯಕರ್ತರು ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಎಲ್ಲಾ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


