Menu

ನಿಮ್ಮ ಸೋಲನ್ನು ಒಪ್ಪಂದವೆಂದು ಕರೆಯಬೇಡಿ: ಟ್ರಂಪ್‌ಗೆ ಇರಾನ್‌ ಟಾಂಗ್‌

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದ್ದು, ಯುದ್ಧ ಕೊನೆಗೊಳಿಸಲು ಇರಾನ್‌ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರವೇ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂಬ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ತಿರಸ್ಕರಿಸಿರುವ ಇರಾನ್‌, ನಿಮ್ಮ ಸೋಲನ್ನು ಒಪ್ಪಂದ ಎಂದು ಕರೆಯಬೇಡಿ ಎಂದು ಟೀಕಿಸಿದೆ.

ಟ್ರಂಪ್‌ ಮಾತಿಗೆ ಪ್ರತಿಕ್ರಿಯೆ ನೀಡಿರುವ IRGC ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಝೋಲ್ಫಾಘರಿ ಹೇಳಿಕೆ ನೀಡಿ, ನಿಮ್ಮ  ಆಂತರಿಕ ಸಂಘರ್ಷಗಳು ನಿಮ್ಮೊಂದಿಗೆ ನೀವೇ ಮಾತುಕತೆ ನಡೆಸುವ ಹಂತಕ್ಕೆ ತಲುಪಿವೆಯೇ ಎಂದು ವ್ಯಂಗ್ಯವಾಡಿದ್ದಾರೆ.

“ನಿಮ್ಮ ವೈಫಲ್ಯವನ್ನು ಒಪ್ಪಂದ ಎಂದು ಕರೆಯಬೇಡಿ” ಎಂದು ಟೀಕಿಸಿದ್ದು, ಈ ಪ್ರದೇಶದಲ್ಲಿ ನಿಮ್ಮ ಆರ್ಥಿಕ ಹೂಡಿಕೆಗಳ ಯಾವುದೇ ಕುರುಹು ಇರುವುದಿಲ್ಲ, ನಮ್ಮ ಉದ್ದೇಶ ನೆರವೇರುವವರೆಗೂ ಹಿಂದಿನ ಇಂಧನ ಮತ್ತು ತೈಲ ಬೆಲೆಗಳು ಮತ್ತೆ ನಿಮಗೆ ಕಾಣಿಸುವುದಿಲ್ಲ. ಇರಾನ್ ವಿರುದ್ಧ ಕ್ರಮ ಕೈಗೊಳ್ಳುವ ಆಲೋಚನೆ ನಿಮ್ಮ ಕೊಳಕು ಮನಸ್ಸಿನಿಂದ ಸಂಪೂರ್ಣ ಅಳಿಸಿದಾಗ ಮಾತ್ರ ಇದು ಸೃಷ್ಟಿಯಾಗುತ್ತದೆ ಎಂದು ತಿಳಿಸಿದ್ದಾರೆ.

ಅಮೆರಿಕ ಹಾಗೂ ಇಸ್ರೇಲ್‌ ಯುದ್ದದಲ್ಲಿ ಇರಾನ್‌ ಬೆಂಬಲಕ್ಕೆ ನಿಲ್ಲುವಂತೆ ಗಲ್ಫ್‌ ದೇಶಗಳನ್ನು ಒತ್ತಾಯಿಸಿದ್ದು, ಅಮೆರಿಕ ನಿಮ್ಮ ರಕ್ಷಣೆಗಾಗಿ ಒಂದು ಗುಂಡನ್ನಾದರೂ ಹಾರಿಸುತ್ತದೆಯೇ ಎಂದು ಕೇಳಿದ್ದಾರೆ.  ಇಸ್ರೇಲ್‌ಗೆ ಆದ್ಯತೆ ನೀಡುವ ಮತ್ತು ನಿಮ್ಮನ್ನು ಪಶುಗಳಂತೆ ಪರಿಗಣಿಸುವ ದೂರದ ದೇಶ ನಮಗೆ ಅಗತ್ಯವಿಲ್ಲ. ಪ್ರಾದೇಶಿಕ ಶಕ್ತಿಗಳ ಸಾಮೂಹಿಕ ಭದ್ರತಾ ವ್ಯವಸ್ಥೆಯನ್ನು ರಚಿಸಬೇಕು. ಅದಕ್ಕಾಗಿ ಅಮೆರಿಕ ಮತ್ತು ಜಿಯೋನಿಸ್ಟ್ ಘಟಕದ ಉಪಸ್ಥಿತಿಯಿಲ್ಲದೆ ಈ ಪ್ರದೇಶದ ದೇಶಗಳೊಂದಿಗೆ ಭದ್ರತೆ ಮತ್ತು ಮಿಲಿಟರಿ ಒಕ್ಕೂಟವನ್ನು ಸ್ಥಾಪಿಸಲು ಇರಾನ್ ಸಿದ್ಧ ಎಂದಿದ್ದಾರೆ.

ಇಸ್ರೇಲ್‌ ಪರವಾಗಿ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮಾಡಿರುವ 400ಕ್ಕೂ ಅಧಿಕ ದೇಶದ ನಾಗರಿಕರನ್ನು ಇರಾನ್‌ ಆಡಳಿತ ಅರೆಸ್ಟ್‌ ಮಾಡಿದೆ.

Related Posts

Leave a Reply

Your email address will not be published. Required fields are marked *