ಅಮೆರಿಕದ ವಾಣಿಜ್ಯ ಹಿತಾಸಕ್ತಿಗಳಿಗಾಗಿ ಇಡೀ ಜಗತ್ತಿನೊಂದಿಗೆ ಸುಂಕ ಯುದ್ಧ ಮಾಡಲು ಸಿದ್ಧ ಎಂದು ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಏ.2ಅಮೆರಿಕದ ವಿಮೋಚನಾ ದಿನ ಎಂದು ಘೋಷಿಸಿರುವ ಟ್ರಂಪ್, ಅಮೆರಿಕ ದೊಂದಿಗೆ ವ್ಯವಹರಿಸುವ ಎಲ್ಲಾ ದೇಶಗಳ ಮೇಲೆ ಸುಂಕ ಹೆಚ್ಚಳ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಏರ್‌ಫೋರ್ಸ್ ಒನ್ ವಿಮಾನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಮೆರಿಕದ ವ್ಯಾಪಾರ ಹಿತಾಸಕ್ತಿ ಗಳನ್ನು ಕಾಪಾಡಿಕೊಳ್ಳಲು ಇಡೀ ಜಗತ್ತಿನೊಂದಿಗೆ ಸುಂಕ ಸಮರ ಮಾಡಲು ಸಿದ್ಧನಿದ್ದೇನೆ. ಇದರ ಫಲಿತಾಂಶ ಏನಾಗುತ್ತದೆ ಎಂಬುದನ್ನು ನೋಡಿಯೇ ಬಿಡೋಣ ಎಂದಿದ್ದಾರೆ. ಟ್ರಂಪ್ ಅವರ ಈ ಹೇಳಿಕೆ ಅಮೆರಿಕನ್ನರನ್ನೇ ಬೆಚ್ಚಿ ಬೀಳಿಸಿದೆ.
ಅಮೆರಿಕದೊಂದಿಗೆ “ನ್ಯಾಯಯುತ” ವಾಣಿಜ್ಯ ಸಂಬಂಧ ಹೊಂದುವಂತೆ ಜಗತ್ತನ್ನು ಒತ್ತಾಯಿಸುತ್ತಿರುವ ಟ್ರಂಪ್, ಈ “ವಾಣಿಜ್ಯ ಅನ್ಯಾಯ”ವನ್ನು ಹೋಗಲಾಡಿಸಲು ಅಮೆರಿಕದೊಂದಿಗೆ ವ್ಯವಹರಿಸುವ ದೇಶಗಳಿಗೆ ಹೆಚ್ಚಿನ ಸುಂಕ ದರ ವಿಧಿಸುವ ಘೋಷಣೆ ಮಾಡಿದ್ದಾರೆ. ಏ.2ರಿಂದಲೇ ಈ ಹೊಸ ಸುಂಕ ದರ ಜಾರಿಗೆ ಬರಲಿದ್ದು, ಈ ದಿನವನ್ನು “ಅಮೆರಿಕದ ವಿಮೋಚನಾ ದಿನ” ಎಂದು ಕರೆದಿದ್ದಾರೆ.
ಅಮೆರಿಕದ ಸರಕು ಮತ್ತು ಸೇವೆಗಳ ಮೇಲೆ ಆಮದು ಸುಂಕ ವಿಧಿಸುವ ಮತ್ತು ಯುಎಸ್ ಜೊತೆ ವ್ಯಾಪಾರದಲ್ಲಿ ಅಸಮತೋಲನ ಹೊಂದಿರುವ ದೇಶಗಳ ಮೇಲೆ ಪರಸ್ಪರ ಸುಂಕ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಟ್ರಂಪ್ ಅವರ ಈ ಸುಂಕ ನೀತಿ ಕೇವಲ ಕೆಲವೇ ಸಿಮೀತ ರಾಷ್ಟ್ರಗಳಿಗೆ ಅನ್ವಯವಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಟ್ರಂಪ್ ಈ ಸುಂಕ ನೀತಿ ಜಗತ್ತಿನ ಎಲ್ಲಾ ದೇಶಗಳಿಗೆ ಅನ್ವಯವಾಗುತ್ತದೆ. ಏನಾದರೂ ಆಗಲಿ ಜಗತ್ತಿನ ಎಲ್ಲಾ ದೇಶಗಳ ಮೇಲೆ ನಾವು ಹೆಚ್ಚುವರಿ ಸುಂಕಗಳನ್ನು ವಿಧಿಸುತ್ತೇವೆ ಎಂದಿದ್ದಾರೆ.
ಪರಸ್ಪರ ಸುಂಕಗಳ ಮೇಲೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಶ್ವೇತಭವನದ ವಕ್ತಾರೆ ಕ್ಯಾರೋಲಿನ್ ಲೆವಿಟ್ ಕೂಡ ಸ್ಪಷ್ಟಪಡಿಸಿದ್ದಾರೆ. ವ್ಯಾಪಾರ ನೀತಿಯಲ್ಲಿ ಅಮೆರಿಕದಿಂದ ಯಾವುದೇ ಉದಾರತೆಯನ್ನು ನಿರೀಕ್ಷಿಸಬೇಡಿ, ಅಮೆರಿಕಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದು ನಮ್ಮ ಆದ್ಯತೆಯೇ ಹೊರತು, ಇದರಿಂದ ಅನ್ಯ ರಾಷ್ಟ್ರಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಚಿಂತಿಸುವುದಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರ ಸುಂಕ ನೀತಿಯಿಂದ ಜಗತ್ತು ಹೊಸ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಜಾಗತಿಕ ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಆಮದುಗಳ ಮೇಲೆ ವಿಧಿಸಲಾಗುವ ಯಾವುದೇ ಸುಂಕವನ್ನು ಅಂತಿಮವಾಗಿ ಅಮೆರಿಕದ ಪ್ರಜೆಯೇ ಭರಿಸಬೇಕಾಗುತ್ತದೆ ಎಂದು ಅಮೆರಿಕದ ಹಲವು ಅರ್ಥಶಾಸ್ತ್ರಜ್ಞರು ಟ್ರಂಪ್ ನೀತಿಯನ್ನು ವಿರೋಧಿಸಿದ್ದಾರೆ.