ಜಾಗತಿಕ ಸುಂಕಗಳನ್ನು ಅಸಂವಿಧಾನಿಕ ಎಂದು ಅಮೆರಿಕದ ಸುಪ್ರೀಂಕೋರ್ಟ್ ಘೋಷಿಸಿದ ಬಳಿಕವೂ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಸುಂಕ ಘೋಷಿಸುವ ಮೂಲಕ ಸವಾಲು ಹಾಕಿದ್ದಾರೆ.
ಜಾಗತಿಕವಾಗಿ ಎಲ್ಲ ದೇಶಗಳ ಮೇಲೆ 10% ಹೆಚ್ಚುವರಿ ಸುಂಕ ಹೇರಿಕೆ ಮಾಡಿದ್ದಾರೆ. ಸೆಕ್ಷನ್ 122 ರಡಿ 10% ಜಾಗತಿಕ ಸುಂಕವನ್ನು ವಿಧಿಸುವ ಆದೇಶವನ್ನು ಟ್ರಂಪ್ ಹೊರಡಿಸಿ, ಸೋಶಿಯಲ್ ಮೀಡಿಯಾ ಟ್ರೂಥ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಈಗಿರುವ ಸುಂಕದ ಜೊತೆಗೆ 10% ಹೆಚ್ಚುವರಿ ವಿಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಮೆರಿಕದ ಉದ್ಯಮ, ಕೈಗಾರಿಕೆ, ಕಾರ್ಮಿಕರ ರಕ್ಷಣೆಗೆ ಸುಂಕ ಪ್ರಬಲ ಸಾಧನ. ಅನ್ಯಾಯದ ವ್ಯಾಪಾರ ನೀತಿಗಳಿಂದ ಅಮೆರಿಕವನ್ನು ರಕ್ಷಿಸಲು ಆಡಳಿತವು ಸೆಕ್ಷನ್ 301 ಮತ್ತು ಇತರ ನಿಬಂಧನೆಗಳಡಿ ಹಲವು ತನಿಖೆಗಳನ್ನು ಪ್ರಾರಂಭಿಸುತ್ತಿದೆ ಎಂದಿದ್ದಾರೆ.
ಸುಪ್ರೀಂಕೋರ್ಟ್ ಸರ್ಕಾರದ ವಾದಗಳನ್ನು ಸರಿಯಾಗಿ ಆಲಿಸಿಲ್ಲ. ಸುಪ್ರೀಂಕೋರ್ಟ್ ಆದೇಶ ನಿರಾಶಾದಾಯಕ, ಈ ತೀರ್ಪು ಅಮೆರಿಕದ ಆರ್ಥಿಕ ಹಿತಾಸಕ್ತಿಗಳಿಗೆ ಹಾನಿ ಮಾಡಬಹುದು. ಆದೇಶದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಅಮೆರಿಕದ ಕೈಗಾರಿಕೆಗಳ ಹಿತಾಸಕ್ತಿಗಳಿಗೆ ನ್ಯಾಯಾಲಯವು ಪ್ರಾಮುಖ್ಯತೆ ನೀಡಿಲ್ಲ. ಅಮೆರಿಕವನ್ನು ಮತ್ತೆ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಕಠಿಣ ವ್ಯಾಪಾರ ನೀತಿಗಳು ಅತ್ಯಗತ್ಯ ಎಂದು ಹೇಳಿದ್ದಾರೆ.
ಅಮೆರಿಕನ್ ಕೈಗಾರಿಕೆಗಳು ಮತ್ತು ಕಾರ್ಮಿಕರ ಹಿತಾಸಕ್ತಿ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಎಂಟು ಯುದ್ಧಗಳಲ್ಲಿ ಐದು ಯುದ್ಧಗಳು ಸುಂಕಗಳಿಂದಲೇ ಕೊನೆಗೊಂಡಿವೆ ಎನ್ನುವುದನ್ನು ಗಮನಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶದ ಬಳಿಕ ಟ್ರಂಪ್ ಘೋಷಿಸಿದ 10% ಹೆಚ್ಚುವರಿ ಸುಂಕದ ಬಿಸಿ ಭಾರತಕ್ಕೂ ತಗುಲಿದೆ. ಅಮೆರಿಕ-ಭಾರತ ವ್ಯಾಪರ ಒಪ್ಪಂದದ ಬಳಿಕ 50% ರಿಂದ 18% ಗೆ ಸುಂಕ ಇಳಿಕೆ ಮಾಡಲಾಗಿತ್ತು. ಈಗ ಹೊಸದಾಗಿ 10% ಹೇರಿಕೆಯಿಂದ 28% ಕ್ಕೆ ಏರಿಕೆಯಾಗಲಿದೆ.


