ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಔಷಧಗಳ ಆಮದಿನ ಮೇಲೆ ಶೇ.100 ಸುಂಕ ಘೋಷಿಸಿದ್ದು, ಅಕ್ಟೋಬರ್ 1ರಿಂದ ಜಾರಿಯಾಗಲಿದೆ. ಅಡುಗೆ ಮನೆ ಪಿಠೋಪಕರಣಗಳ ಮೇಲೆ 50% ಹಾಗೂ ಸ್ನಾನಗೃಹ ಪಿಠೋಪಕರಣ ಆಮದುಗಳ ಮೇಲೆ 30% ಸುಂಕ ಹಾಗೂ ಹೆವಿ ಟ್ರಕ್‌ಗಳ ಮೇಲೆ 25% ಸುಂಕ ವಿಧಿಸುವುದಾಗಿ ಪ್ರಕಟಿಸಿದ್ದಾರೆ.
ಟ್ರಂಪ್ ಅವರ ಈ ಸುಂಕ ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದಾಗಿದ್ದು, ಹಣದುಬ್ಬರಕ್ಕೂ ಕಾರಣವಾಗಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಅಕ್ಟೋಬರ್ 1ರಿಂದ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇ. 100 ಸುಂಕ ವಿಧಿಸುತ್ತೇವೆ. ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿದರೆ ಮಾತ್ರ ಈ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ನಿರ್ಮಾಣ ಹಂತದಲ್ಲಿರುವ ಕಂಪನಿಗಳಿಗೂ ಇದರಿಂದ ವಿನಾಯಿತಿ ಸಿಗಲಿದೆ ಎಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.
ವಿದೇಶಿ ಉತ್ಪನ್ನಗಳು ಅಮೆರಿಕಕ್ಕೆ ಪ್ರವಾಹ ರೀತಿಯಲ್ಲಿ ಹರಿದುಬರುತ್ತಿವುದು ಒಂದೆಡೆಯಾದರೆ ರಾಷ್ಟ್ರೀಯ ಭದ್ರತೆಯ ಕಾರಣದಿಂದಲೂ ಸುಂಕ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ. ಪೀಟರ್‌ಬಿಲ್ಟ್, ಕೆನ್‌ವರ್ತ್, ಫ್ರೈಟ್‌ಲೈನರ್, ಮ್ಯಾಕ್ ಸೇರಿದಂತೆ ನಮ್ಮ ಇತರ ಟ್ರಕ್ ತಯಾರಕರನ್ನು ರಕ್ಷಿಸಲು ಹಾಗೂ ಅವರನ್ನು ಆರ್ಥಿಕವಾಗಿ ಬಲಪಡಿಸಲು ಹೆವಿ ಟ್ರಕ್ ಮೇಲೆ 25% ಸುಂಕ ವಿಧಿಸಿರುವುದಾಗಿ ಹೇಳಿದ್ದಾರೆ.
ಭಾರತೀಯ ಔಷಧ ಕಂಪನಿಗಳಿಗೆ ಈ ಬೆಳವಣಿಗೆಯಿಂದ ದೊಡ್ಡ ಹಿನ್ನಡೆಯಾಗಬಹುದು. ಅಮೆರಿಕ ಭಾರತದ ಅತಿದೊಡ್ಡ ಔಷಧ ರಫ್ತು ಮಾರುಕಟ್ಟೆಯಾಗಿದೆ.ಡಾ. ರೆಡ್ಡೀಸ್ ಲ್ಯಾಬೋರೇಟರೀಸ್, ಸನ್ ಫಾರ್ಮಾ, ಲುಪಿನ್ ಮತ್ತು ಅರಬಿಂದೋ ಫಾರ್ಮಾದಂತಹ ಪ್ರಮುಖ ಭಾರತೀಯ ಕಂಪನಿಗಳು ಅಮೆರಿಕ ಮಾರುಕಟ್ಟೆಯನ್ನೇ ಪ್ರಮುಖವಾಗಿ ಅವಲಂಬಿತವಾಗಿವೆ. ಇವುಗಳ ಹೆಚ್ಚಿನ ಆದಾಯ ಅಮೆರಿಕದಿಂದ ಬರುತ್ತಿದೆ. ಈ ಸುಂಕ ಕಂಪೆನಿಗಳ ವೆಚ್ಚವನ್ನು ಹೆಚ್ಚಿಸಬಹುದು.
ಇತ್ತೀಚೆಗಷ್ಟೇ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ಟ್ರಂಪ್, ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ಯುದ್ಧಕ್ಕೆ ಭಾರತ ಮತ್ತು ಚೀನಾ ಹಣಕಾಸು ಹೂಡಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಮೆರಿಕ ಮತ್ತು ಭಾರತದ ನಡುವಿನ ಹಳಸಿದ ಸಂಬಂಧ ಮತ್ತೆ ಸರಿಯಾಗಲಿದೆ ಎನ್ನುವ ಹೊತ್ತಿಗೆ ಟ್ರಂಪ್ ಮತ್ತೊಮ್ಮೆ ಭಾರತವನ್ನು ಅಪರಾಧಿ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.
ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸುವ ಮೂಲಕ ಚೀನಾ ಮತ್ತು ಭಾರತ ಉಕ್ರೇನ್ ಮೇಲಿನ ಯುದ್ಧಕ್ಕೆ ಪ್ರಾಥಮಿಕ ಹಣಕಾಸು ಒದಗಿಸುತ್ತಿವೆ. NATO ರಾಷ್ಟ್ರಗಳು ರಷ್ಯಾದ ಇಂಧನ ಮತ್ತು ರಷ್ಯಾದ ಉತ್ಪನ್ನಗಳನ್ನು ಖರೀದಿಸುತ್ತಿವೆ, ಇದು ಸಹಿಸಲಾಗದ ವಿಷಯಎಂದು ಟ್ರಂಪ್ ಹೇಳಿದ್ದಾರೆ.