ದೋಹಾ: ಭಾರತದ ಡಬಲ್ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ದೋಹಾ ಡೈಮಂಡ್ ಲೀಗ್ ನಲ್ಲಿ 90.23 ಮೀ. ಜಾವೆಲಿನ್ ಎಸೆದು ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ನೀರಜ್ ಚೋಪ್ರಾ ಶುಕ್ರವಾರ ನಡೆದ ದೋಹಾ ಡೈಮಂಡ್ ಲೀಗ್ ನಲ್ಲಿ 90.23 ಮೀ. ದೂರ ದಾಖಲಿಸುವ ಮೂಲಕ ವೃತ್ತಿಜೀವನದಲ್ಲಿ ಮೊದಲ ಬಾರಿ 90 ಮೀ. ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ 25ನೇ ಕ್ರೀಡಾಪಟು ಎನಿಸಿಕೊಂಡರು. ವೈಯಕ್ತಿಕ ಶ್ರೇಷ್ಠ ಸಾಧನೆ ಹೊರತಾಗಿಯೂ ನೀರಜ್ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಜರ್ಮನಿಯ ಜೂಲಿಯನ್ ವೆಬ್ಬರ್ 91.06 ಮೀ. ಎಸೆದು ಚಿನ್ನದ ಪದಕಕ್ಕೆ ಪಾತ್ರರಾದರು.
ನೀರಜ್ ಮೂರನೇ ಪ್ರಯತ್ನದಲ್ಲಿ 90 ಮೀ.ಗೂ ಅಧಿಕ ದೂರ ದಾಖಲಿಸುವ ಮೂಲಕ ಬಹುದಿನಗಳ ಕನಸು ನನಸು ಮಾಡಿಕೊಂಡರು. 3033ರಲ್ಲಿ ನಡೆದ ಸ್ಟಾಕ್ ಹೋಂ ಡೈಮಂಡ್ ಲೀಗ್ ನಲ್ಲಿ ನೀರಜ್ ಚೋಪ್ರಾ ಕೊನೆಯ ಬಾರಿ ಗರಿಷ್ಠ 89.94 ಮೀ. ದಾಖಲಿಸಿದರು. ಅದಾದ ನಂತರ ಹಲವಾರು ಬಾರಿ 90 ಮೀ. ಗಡಿ ಸಮೀಪ ಬಂದಿದ್ದರೂ ಅದನ್ನು ಮೀರುವ ಸಾಧನೆ ತೋರುವಲ್ಲಿ ವಿಫಲರಾಗಿದ್ದರು.
ಕಳೆದ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕೂಡ 90ರ ಗಡಿ ದಾಟುವ ಉಮೇದು ಹೊಂದಿದ್ದರೂ ಅತಿಯಾದ ಆತ್ಮವಿಶ್ವಾಸದಿಂದ ಈ ಗುರಿ ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೂ ಬೆಳ್ಳಿ ಪದಕಕ್ಕೆ ತೃಪ್ತರಾಗಿದ್ದರು. ಪಾಕಿಸ್ತಾನದ ಸ್ಪರ್ಧಿ 90 ಮೀ. ಗಡಿ ದಾಟಿ ಚಿನ್ನದ ಪದಕ ಗೆದ್ದುಕೊಂಡಿದ್ದರು.
27 ವರ್ಷದ ನೀರಜ್ ಚೋಪ್ರಾ ಮೊದಲ ಎಸೆತದಲ್ಲೇ 88.44ಮೀ. ಎಸೆದು ಭರ್ಜರಿ ಆರಂಭ ಪಡೆದರು. ಈ ಮೂಲಕ ಟೊಕಿಯೋದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಅರ್ಹತೆ ಗಿಟ್ಟಿಸಿದರು. ಈ ಟೂರ್ನಿಗೆ ಅರ್ಹತೆ ಪಡೆಯಲು 85 ಮೀ. ನಿಗದಿಪಡಿಸಲಾಗಿತ್ತು. ನೀರಜ್ ಎರಡನೇ ಎಸೆತದಲ್ಲಿ ಫೌಲ್ ಮಾಡಿದರು. ಆದರೆ ಮೂರನೇ ಎಸೆತದಲ್ಲಿ ಅಮೋಘ ಪ್ರದರ್ಶನ ನೀಡಿ 90ರ ಗಡಿ ದಾಟಿ ಇತಿಹಾಸ ಬರೆದರು.