ಶಿವಮೊಗ್ಗ ನಗರದ ಸೋಗಾನೆಯ ಕೇಂದ್ರ ಕಾರಾಗೃಹದ ಕೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಹೊಟ್ಟೆನೋವು ಎಂದು ಜೈಲಿನ ಆಸ್ಪತ್ರೆಗೆ ಹೋದ ಕೈದಿ ಕೈದಿ ದೌಲತ್ ಖಾನ್ ಅಲಿಯಾಸ್ ಗುಂಡಾ (30) ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಎಕ್ಸ್ ರೇ ಪರೀಕ್ಷೆ ನಡೆಸಿ ಶಸ್ತ್ರಚಿಕಿತ್ಸೆ ಮಾಡಿದಾಗ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿದೆ.
ಕೈದಿಯ ಹೊಟ್ಟೆಯಲ್ಲಿದ್ದ ಒಂದು ಇಂಚು ಅಗಲದ, ಮೂರು ಇಂಚು ಉದ್ದದ ಮೊಬೈಲ್ ಫೋನ್ ಅನ್ನು ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರಗೆ ತೆಗೆದಿದ್ದಾರೆ. ಅಪರಾಧ ಪ್ರಕರಣವೊಂದರಲ್ಲಿ ದೌಲತ್ ಖಾನ್‌ಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೂನ್ 24ರಂದು ಜೈಲಿನ ಆಸ್ಪತ್ರೆಗೆ ಬಂದು ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಹೀಗಾಗಿ ವೈದ್ಯರು ಔಷಧ ಕೊಟ್ಟಿದ್ದರು. ಹೊಟ್ಟೆನೋವು ಹೆಚ್ಚಾದಾಗ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದರು.
ಶಸ್ತ್ರಚಿಕಿತ್ಸೆ ನಡೆಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದೆ. ನಿಷೇಧವಿದ್ದರೂ ಜೈಲಿನೊಳಗೆ ಮೊಬೈಲ್ ಫೋನ್ ತಲುಪಿರುವ ಕುರಿತು ತನಿಖೆ ನಡೆಸುವಂತೆ ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ. ರಂಗನಾಥ್ ಅವರು ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.