ಲಕ್ನೋದ KGMU ಸರ್ಕಾರಿ ವೈದ್ಯಕೀಯ ಸಂಸ್ಥೆಯ ವೈದ್ಯ ಮದುವೆಯಾಗುವುದಾಗಿ ನಂಬಿಸಿ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದು, ಬಳಿಕ ಆಕೆಯೊಂದಿಗಿನ ಖಾಸಗಿ ಫೋಟೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿರುವುದಾಗಿ ಪ್ರಕರಣ ದಾಖಲಾಗಿದೆ.
ವೈದ್ಯನ ಹಿನ್ನೆಲೆ ಮತ್ತು ವಿಳಾಸಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿ ಮೊಹ್ಮದ್ ಅದಿಲ್‌ನನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ನರ್ಸಿಂಗ್ ವಿದ್ಯಾರ್ಥಿನಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತ ವಿಶ್ವಜೀತ್ ಶ್ರೀವಾಸ್ತವ ತಿಳಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ವೈದ್ಯ ನನ್ನ ಜೊತೆ ಹಲವು ಬಾರಿ ದೈಹಿಕ ಸಂಬಂಧ ನಡೆಸಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದು, ಕಿಯಾಸರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮದುವೆಯಾಗುವಂತೆ ಒತ್ತಾಯಿಸಿದಾಗ ಆರೋಪಿ ನಿರಾಕರಿಸಿ ಖಾಸಗಿ ಪೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹದಿನೈದು ದಿನಗಳಲ್ಲಿ ಸಂಸ್ಥೆಯಲ್ಲಿ ವರದಿಯಾದ ಎರಡನೇ ಪ್ರಕರಣ ಇದಾಗಿದೆ, ಪಶ್ಚಿಮ ಬಂಗಾಳದ ವೈದ್ಯರೊಬ್ಬರು ಸಹವೈದ್ಯನ ವಿರುದ್ಧ ದೂರು ದಾಖಲಿಸಿ ಲವ್ ಜಿಹಾದ್ ಆರೋಪ ಮಾಡಿದ್ದರು. ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದ ಎಂದು ದೂರು ನೀಡಿದ್ದರು. ಆ ಪ್ರಕರಣದ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.


